ಕಟ್ಟಿಗೆಯ ತುಂಡಿನಿಂದ ಹೊಡೆದು ಪತ್ನಿಯನ್ನು ಕೊಲೆಗೈದ ಪತಿ

ಬೆಳ್ತಂಗಡಿ: ಪತಿಯೇ ತನ್ನ ಪತ್ನಿಯ ತಲೆಗೆ ಕಟ್ಟಿಗೆಯ ತುಂಡಿನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯಾ ಗಂಡಿಬಾಗಿಲು ಸಮೀಪ ಗುರುವಾರ ರಾತ್ರಿ ನಡೆದಿದೆ.

ಆರೋಪಿ ಪತಿಯನ್ನು ನೆರಿಯಾ ಗ್ರಾಮದ ಗಂಡಿಬಾಗಿಲು ನಿವಾಸಿ ಜಾನ್ಸನ್(47)‌ ಎಂದು ಗುರುತಿಸಲಾಗಿದೆ. ಈತನ ಪತ್ನಿ ಸೌಮ್ಯಾ ಫ್ರಾನ್ಸಿಸ್(40)‌ ಕೊಲೆಯಾದ ಮಹಿಳೆ.

ಪತಿ ಪ್ರತಿದಿನ ಕುಡಿದು ಬಂದು ಪತ್ನಿಯ ಜತೆಗೆ ಜಗಳವಾಡುತ್ತಿದ್ದ. ಆದರೆ ಗುರುವಾರ ಜಗಳ ವಿಕೋಪಕ್ಕೆ ತಿರುಗಿದ್ದು, ಜಾನ್ಸನ್‌ ಕುಡಿದ ಮತ್ತಿನಲ್ಲಿ ಕಟ್ಟಿಗೆಯ ತುಂಡಿನಿಂದ ಸೌಮ್ಯಳಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಸೌಮ್ಯರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರೊಳಗೆ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಬಗ್ಗೆ ಸೌಮ್ಯಳ ಸಹೋದರ ಸನೋಜ್‌ ಫ್ರಾನ್ಸಿಸ್‌ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.