ನವದೆಹಲಿ: ಇಂದು ರಾತ್ರಿ 8 ಗಂಟೆಗೆ ನಿವಾರ್ ಚಂಡಮಾರುತ ತಮಿಳುನಾಡಿನ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ಇದು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮಂಗಳವಾರ ರಾತ್ರಿಯೇ ನಿವಾರ್ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿದೆ. ಬುಧವಾರ ಅದು ತಮಿಳುನಾಡು ಮತ್ತು ಪುದುಚೇರಿಯನ್ನು ಕಾರೈಕಲ್ ಮತ್ತು ಮಾಮಲ್ಲಪುರಂ ನಡುವೆ ಹಾದು ಹೋಗಲಿದೆ.
ಈ ವೇಳೆಗೆ ಗಂಟೆಗೆ 120-130 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಈ ಹಿನ್ನೆಲೆಯಲ್ಲಿ ಮೂರು ರಾಜ್ಯಗಳಲ್ಲಿ ಭಾರೀ ಮಳೆಯ ಸಾಧ್ಯತೆಗಳಿವೆ. ಹೀಗಾಗಿ ಯಾರೂ ಕೂಡ ಮೀನುಗಾರಿಕೆಗೆ, ಮೋಟಾರ್ ಬೋಟ್ಸ್ ಸೇರಿ ಇನ್ನಿತರೆ ಚಟುವಟಿಕೆಗಳಿಗಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.