ಯುವಜನತೆಯಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ: ಪ್ರೊ. ಕೊಡಂಚ ವಿಷಾದ

ಶಿರ್ವ: ವಿದ್ಯಾರ್ಥಿಗಳು ಕಲಿಕೆಯ ಅವಧಿಯಲ್ಲಿ ಗುರು, ಹಿರಿಯರ ಮಾರ್ಗದರ್ಶನದೊಂದಿಗೆ ಮುನ್ನಡೆದರೆ ಜೀವನದಲ್ಲಿ ಸಾಧನೆಯ ಶಿಖರವನ್ನು ಏರಲು ಸಾಧ್ಯ ಎಂದು ಇನ್ನಂಜೆ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎ.ಪಿ. ಕೊಡಂಚ ಹೇಳಿದರು.

ಶಿರ್ವ ಸಂತ ಮೇರಿ ಕಾಲೇಜಿನ ರೋವರ್ಸ್-ರೇಂಜರ್ಸ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ಕಾಲೇಜಿನಲ್ಲಿ ಹಮ್ಮಿಕೊಂಡ ‘ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ’ದಲ್ಲಿ ಭಾಗವಹಿಸಿದರು.

ವಿದ್ಯಾರ್ಥಿಗಳನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವಲ್ಲಿ ಶಿಕ್ಷಣ ಸಂಸ್ಥೆಗಳ ಜತೆಗೆ ಹೆತ್ತವರ ಪಾತ್ರ ಕೂಡ ಮಹತ್ತರವಾಗಿದೆ. ಮೌಲ್ಯಾಧರಿತ ಜೀವನ ನಡೆಸಲು ಪಠ್ಯದ ಜತೆಗೆ ಸಾಮಾನ್ಯ ಜ್ಞಾನವೂ ಅವಶ್ಯಕ. ಇಂದು ಯುವಜನತೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಗುಲಾಮರಾಗಿದ್ದು, ಹೊರಜಗತ್ತಿನ ಅರಿವಿಲ್ಲದಾಗಿದೆ. ಮಾನವೀಯ ಸಂಬಂಧಗಳು ಕುಸಿಯುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಹೆರಾಲ್ಡ್ ಮೋನಿಸ್ ಮಾತನಾಡಿ, ಇಂದಿನ ಯುವಜನತೆ ಅನುಕರಣೆಗೆ ಮಾರು ಹೋಗಿದ್ದು, ಸ್ವ ಪ್ರತಿಭೆಯನ್ನು ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಇಂತಹ ಮೌಲ್ಯಾಧರಿತ ಕಾರ್ಯಕ್ರಮಗಳು ಯುವಕರಲ್ಲಿ ಸಾಂಸ್ಕೃತಿಕ ತಲಪಾಯವನ್ನು ಗಟ್ಟಿಗೊಳಿಸುವುದರೊಂದಿಗೆ ಭವಿಷ್ಯದ ಭದ್ರ ಬುನಾದಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಎನ್ಎಸ್ಎಸ್ ಯೋಜನಾಧಿಕಾರಿಗಳಾದ ಪ್ರೇಮನಾಥ್, ರಕ್ಷಾ, ರೋವರ್ ಸ್ಕೌಟ್ ಲೀಡರ್ ಪ್ರಕಾಶ್ ಹಾಗೂ ರೇಂಜರ್ ಲೀಡರ್ ಸಂಗೀತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿನಿಯರಾದ ಪ್ರಜ್ಞಾ ಸ್ವಾಗತಿಸಿದರು. ಸಮೀಕ್ಷಾ ವಂದಿಸಿದರು. ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.