ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಬಳಿ ಮಾನವ ಅಸ್ಥಿಪಂಜರ ಪತ್ತೆ; ತನಿಖೆ ಪ್ರಾರಂಭ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಾಡಿನಲ್ಲಿ ಮಾನವ ಅಸ್ಥಿಪಂಜರದ ಕುರುಹು ಪತ್ತೆಯಾಗಿದ್ದು, ಸ್ಥಳೀಯ ಪರಿಸರದಲ್ಲಿ ಭಯ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಮೀಸಲು ಅರಣ್ಯಕ್ಕೆ ಕಟ್ಟಿಗೆ ತರಲೆಂದು ತೆರಳಿದ ಸ್ಥಳೀಯರಿಗೆ ಇಲ್ಲಿ ಮಾನವ ತಲೆಬುರುಡೆ ಹಾಗೂ ಅವಶೇಷಗಳು ಪತ್ತೆಯಾಗಿದ್ದು, ಈ ಬಗ್ಗೆ ಅವರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು ತಪಾಸಣೆ ನಡೆಸಿದ ವೇಳೆ ಅಸ್ಥಿಪಂಜರ ಪತ್ತೆಯಾದ ಸ್ಥಳದ ಪಕ್ಕದಲ್ಲಿನ ಮರದ ಕೊಂಬೆಯೊಂದರಲ್ಲಿ ಚೀಲವೊಂದು ಪತ್ತೆಯಾಗಿದೆ. ಈ ಘಟನೆಯ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.