ರೈತರಿಗೆ ಕೈತುಂಬಾ ಆದಾಯ : ಸವಣೂರಿನ ವೀಳ್ಯದೆಲೆಗೆ ಪಾಕಿಸ್ತಾನದಲ್ಲೂ ಬೇಡಿಕೆ

ಹಾವೇರಿ : ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ಬೆಳೆಯುವ ವೀಳ್ಯದೆಲೆಗೆ ಭಾರಿ ಬೇಡಿಕೆ ಇದೆ. ಜಿಲ್ಲೆಯ ಸವಣೂರು ಖಾರ ತಯಾರಿಕೆಗೆ ಪ್ರಸಿದ್ಧಿ ಪಡೆದಿದೆ. ಒಮ್ಮೆ ವೀಳ್ಯದೆಲೆ ಹಚ್ಚಿದರೆ ಬಳ್ಳಿಯನ್ನು ಸರಿಯಾಗಿ ನೋಡಿಕೊಂಡರೆ 10 ವರ್ಷಗಳ ಕಾಲ ವೀಳ್ಯದೆಲೆ ಪಡೆಯಬಹುದು. ಈ ಬಳ್ಳಿಗೆ ಕೊಟ್ಟಿಗೆಯ ಗೊಬ್ಬರವೇ ಬೇಕು. ಅಧಿಕ ಮಳೆಯಾದರೆ ಬಳ್ಳಿ ಕೊಳೆಯಲಾರಂಭಿಸುತ್ತದೆ. ಕಡಿಮೆ ಮಳೆಯಾದರೆ ಬಳ್ಳಿ ಒಣಗುವ ಸಮಸ್ಯೆ ಕಾಡುತ್ತದೆ. ಹಬ್ಬ ಹರಿದಿನಗಳು ಸೇರಿದಂತೆ ವರ್ಷಪೂರ್ಣ ವೀಳ್ಯದೆಲೆಗೆ ಬೇಡಿಕೆ ಇರುತ್ತೆ.ಜೊತೆಗೆ ಸವಣೂರು ತಾಲೂಕಿನಲ್ಲಿ ಬೆಳೆಯುವ ವೀಳ್ಯದೆಲೆ ಸಹ ಹೆಸರು ಪಡೆದಿದೆ. ಇಲ್ಲಿಯ ಬಹುತೇಕ ರೈತರು ವೀಳ್ಯದೆಲೆ ಬೆಳೆಯುತ್ತಾರೆ. ಇಲ್ಲಿಯ ವಾಯುಗುಣ ಮತ್ತು ಭೂಮಿಯ ಮಣ್ಣಿನ ಗುಣದಿಂದ ರುಚಿಕರವಾದ ವೀಳ್ಯದೆಲೆ ಬೆಳೆಯಲಾಗುತ್ತದೆ. ಸವಣೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ವೀಳ್ಯದೆಲೆ ತೋಟಗಳು ಕಂಡುಬರುತ್ತವೆ. ಪ್ರತಿ ಎಕರೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಯುವ ವೀಳ್ಯದೆಲೆ ಬಳ್ಳಿ ಹಚ್ಚಿ ಒಂದು ವರ್ಷದ ನಂತರ ಕಟಾವಿಗೆ ಬರುತ್ತೆ. ಆದರೆ ಸಾಮಾನ್ಯವಾಗಿ 18 ತಿಂಗಳ ನಂತರ ವೀಳ್ಯದೆಲೆಗಳನ್ನ ಕಟಾವ್ ಮಾಡಲಾಗುತ್ತದೆ.

ಚಳಿಗಾಲದಲ್ಲಿ ಇಳುವರಿ ಕಡಿಮೆ: ಉಳಿದಂತೆ ಬಿಳಿಯಾದ ಎಲೆಗಳನ್ನು ರಾಜ್ಯದ ವಿವಿಧೆಡೆ ಬಳಕೆ ಮಾಡಲಾಗುತ್ತದೆ. ಪ್ರಸ್ತುತ ಬರಗಾಲ ಇರುವುದರಿಂದ ಬೆಳೆ ಮೇಲೆ ಸಹ ಪರಿಣಾಮ ಬೀರಿದೆ. ಚಳಿಗಾಲದಿಂದ ಸಹ ಇಳುವರಿ ಕಡಿಮೆಯಾಗಿದೆ. ಆದರೆ ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ವರ್ಷ ಉತ್ತಮವಾದ ಎಲೆಗಳು ಸಿಗುತ್ತಿವೆ. ಅಲ್ಲದೆ ಬೆಲೆಯು ಉತ್ತಮವಾಗಿದೆ, ಇಬ್ಬನಿಯಿಂದ ಎಲೆಗಳಲ್ಲಿ ಕಂದುರೋಗದ ತರಹದ ಕಂಡುಬಂದರೂ ಅವುಗಳ ಸಂಖ್ಯೆ ಕಡಿಮೆ. ಪ್ರಸ್ತುತ 12 ಸಾವಿರ ಎಲೆಗಳಿರುವ ಪೆಂಡಿಗಳಿಗೆ 5 ಸಾವಿರದಿಂದ 15 ಸಾವಿರ ರೂಪಾಯಿವರೆಗೆ ಬೆಲೆ ಸಿಗುತ್ತಿದೆ. ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಹೊರವಲಯದಲ್ಲಿ ಎಲೆಪೆಂಡಿಗಳನ್ನು ಹರಾಜು ಮಾಡಲಾಗುತ್ತದೆ.

ಎಲೆಬಳ್ಳಿ ತೋಟದಲ್ಲಿ ಬೆಳೆದ ಎಲೆಗಳನ್ನು ಕತ್ತರಿಸಿ ಪೆಂಡಿಗಳಲ್ಲಿ ಕಟ್ಟಲಾಗುತ್ತದೆ. ಈ ರೀತಿ ಒಂದು ಪೆಂಡಿಯಲ್ಲಿ 12 ಸಾವಿರ ಎಲೆಗಳನ್ನಿಟ್ಟು ಒಂದು ಪೆಂಡಿ ಕಟ್ಟಲಾಗುತ್ತೆ. ಎಲೆಗಳಲ್ಲಿ ಉತ್ತಮವಾದ, ಬಿಳಿಯಾದ ಎಲೆಗಳಿಗೆ ಒಂದು ದರವಾದರೇ ಸ್ವಲ್ಪ ಕಪ್ಪು ಎಲೆ ಮತ್ತು ಬಲಿತರೆ ದರ ಕಡಿಮೆಯಾಗುತ್ತೆ. ಇನ್ನು ಕೆಲ ವೀಳ್ಯದೆಲೆಗಳು ಪಾಕಿಸ್ತಾನದ ಕರಾಚಿವರೆಗೆ ರಫ್ತಾಗುತ್ತವೆ. ಸವಣೂರಿನ ತೋಟಗಳಲ್ಲಿ ವೀಳ್ಯದೆಲೆ ಕಪ್ಪಾದ ಮತ್ತು ಅತಿ ಹೆಚ್ಚು ದಿನವಾದ ಎಲೆಗಳನ್ನು ಕತ್ತರಿಸಿ ತುಂಬು ಪ್ರತ್ಯೇಕಿಸಿ ಕರಾಚಿಗೆ ಕಳಿಸಲಾಗುತ್ತದೆ. ಈ ರೀತಿಯಾದ ಎಲೆ 10 ದಿನದವರೆಗೆ ಕೆಡದಂತೆ ಇರುವ ಕಾರಣ ದೂರದ ಊರುಗಳಿಗೆ ಈ ಎಲೆಗಳನ್ನು ರಪ್ತು ಮಾಡಲಾಗುತ್ತದೆ. ನಮ್ಮಲ್ಲಿ ಕಲ್ಕತ್ತಾ ಬನಾರಸ್ ಹೆಸರಿನ ಎಲೆಗಳಿರುವಂತೆ ಕರಾಚಿಯಲ್ಲಿ ಪಾನ್​ ಬೀಡಾಗಳಿಗೆ ಸವಣೂರು ಎಲೆ ಬಳಸಲಾಗುತ್ತದೆ ಎನ್ನುತ್ತಾರೆ ಇಲ್ಲಿಯ ವೀಳ್ಯದೆಲೆ ಬೆಳೆಗಾರರು.

ಎಲೆಬಳ್ಳಿಗೆ ರಾಸಾಯನಿಕ ಗೊಬ್ಬರ ಹಾಕಿ ಚಾನಲ್ ನೀರು ಹಾಯಿಸಿದರೆ ಎಲೆ ಬಿಳಿಯಾಗಿ ಬಂದರೂ ರುಚಿಯಾಗಿರುವುದಿಲ್ಲ. ಜೊತೆಗೆ ಬಳ್ಳಿಗಳ ಆಯುಷ್ಯ ಸಹ ಕಡಿಮೆ ಎನ್ನುತ್ತಾರೆ ರೈತರು. ಪಾನ್​ಗಳಿಗೆ ಬಳಸುವ ಬನಾರಸ್ ಮತ್ತು ಕಲ್ಕತ್ತಾ ಎಲೆಗಳನ್ನು ಇಲ್ಲಿಯ ತೋಟಗಾರರು ಬೆಳೆದಿದ್ದಾರೆ. ಆದರೆ ಮೂಲ ಕಲ್ಕತ್ತಾ ಮತ್ತು ಬನಾರಸ್‌ ರುಚಿ ಮತ್ತು ವಾಸನೆ ಬರದ ಕಾರಣ ಆ ರೀತಿ ಎಲೆಗಳನ್ನ ಕಡಿಮೆ ಸಂಖ್ಯೆಯಲ್ಲಿ ಬೆಳೆಯಲಾಗುತ್ತದೆ.

ವೀಳ್ಯದೆಲೆಗೆ ಉತ್ತಮವಾದ ಬೇಡಿಕೆ: ಒಂದು ಎಕರೆ ಎಲೆಬಳ್ಳಿ ತೋಟದಲ್ಲಿ ಉತ್ತಮವಾದ ಇಳುವರಿ ಬಂದು ಬೆಲೆ ಸಿಕ್ಕರೆ ಮೂರು ಲಕ್ಷಕ್ಕೂ ಅಧಿಕ ರೂಪಾಯಿ ಆದಾಯ ಬರುತ್ತೆ. ಕೊಟ್ಟಿಗೆಯ ಗೊಬ್ಬರ ಸೇರಿದಂತೆ ಜೈವಿಕ ಗೊಬ್ಬರ ಹಾಕಿ ಸರಿಯಾಗಿ ಬಳ್ಳಿಗಳಿಗೆ ನೀರು ಹರಿಸಿದರೆ ವರ್ಷಪೂರ್ತಿ ಆದಾಯವನ್ನು ಎಲೆಬಳ್ಳಿತೋಟ ಮಾಡಿದ ರೈತರು ಪಡೆಯುತ್ತಾರೆ. ಶ್ರಾವಣಮಾಸ, ದಸರಾ, ದೀಪಾವಳಿ ಸಮಯದಲ್ಲಂತೂ ವೀಳ್ಯದೆಲೆಗೆ ಉತ್ತಮವಾದ ಬೇಡಿಕೆ ಇರುತ್ತೆ. ಇದರಿಂದಾಗಿ ಎಲೆಬಳ್ಳಿತೋಟದ ರೈತರು ಕೈತುಂಬಾ ಆದಾಯ ಪಡೆಯುತ್ತಾರೆ.