ದೇಶದಾದ್ಯಂತ ವಿಧ್ವಂಸಕ ಕೃತ್ಯ ನಡೆಸಲು ಉಗ್ರರ ಸಂಚು: ಬಂಧಿತ ಶಂಕಿತ ಉಗ್ರ ಅಬ್ದುರ್ ರೆಹಮಾನ್ ನಿಂದ ಸ್ಫೋಟಕ ಸಂಗತಿ ಬಹಿರಂಗ

ಬೆಂಗಳೂರು: ದೇಶದಾದ್ಯಂತ ವಿಧ್ವಂಸಕ ಕೃತ್ಯ ನಡೆಸಲು ಉಗ್ರರು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ಸಂಗತಿ ಈಗ ಬಂಧಿತ ಶಂಕಿತ ಉಗ್ರ ಅಬ್ದುರ್ ರೆಹಮಾನ್ ನಿಂದ ಹೊರಬಿದ್ದಿದೆ.

ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಎಂಬ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನೇತ್ರ ಶಾಸ್ತ್ರಜ್ಞನಾಗಿ ಕಾರ್ಯನಿರ್ವಹಿಸುತ್ತಿದ್ದ ಅಬ್ದುಲ್ ರೆಹಮಾನ್ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದರು. ಇದೀಗ ಶಂಕಿತ ಉಗ್ರನನ್ನು ಎನ್ಐಎ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಭಯಾನಕ ಸಂಗತಿಗಳು ಬೆಳಕಿಗೆ ಬಂದಿದೆ.

ದೇಶದಾದ್ಯಂತ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂಬ ಭಯಾನಕ ಸಂಗತಿ ತಿಳಿದುಬಂದಿದೆ.

*ಉಗ್ರರ ಜತೆ ಸಂಪರ್ಕಿಸಲು ಆ್ಯಪ್*
ಶಂಕಿತ ಉಗ್ರ ಅಬ್ದುರ್ ಉಗ್ರರರನ್ನು ಸಂಪರ್ಕಿಸುವ ಆ್ಯಪ್ ಅಭಿವೃದ್ಧಿ ಪಡಿಸಲು ಮುಂದಾಗಿದ್ದ ಎಂಬ ವಿಚಾರ ಗೊತ್ತಾಗಿದೆ. ಸ್ಯಾಟಲೈಟ್ ಕರೆಗಳನ್ನು ಮೊಬೈಲ್ ನಲ್ಲಿ ಸ್ವೀಕರಿಸುವ ಆ್ಯಪ್ ಇದಾಗಿದ್ದು, ಇದು ಕೆಲವೇ ದಿನದಲ್ಲಿ ರೆಡಿಯಾಗುತ್ತಿತ್ತು ಎಂದು ಸ್ವತಃ ಆತನೇ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.

*ಕೋಡ್ ವರ್ಡ್ ಬಳಕೆ*
ಜನಸಾಮಾನ್ಯರೊಂದಿಗೆ ನೇತ್ರಶಾಸ್ತ್ರಜ್ಞನೆಂದು ಗುರುತಿಸಿಕೊಂಡಿದ್ದ ಅಬ್ದುರ್, ಉಗ್ರರ ಜತೆಗೆ ನಿಜವಾದ ಹೆಸರು ಬಳಸದೆ ಕೋಡ್ ವರ್ಡ್ ಭಾಷೆಯ ಮೂಲಕ ಸಂಪರ್ಕದಲ್ಲಿದ್ದ. ಉಗ್ರರರು ಈತನನ್ನು ‘ಡಾಕ್ಟರ್ ಬ್ರೇವ್ ಬಸವನಗುಡಿ’ ಎಂಬ ಕೋಡ್ ವರ್ಡ್ ನಿಂದ ಕರೆಯುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ.