ಬೆಂಗಳೂರು: ರಾಜ್ಯದಲ್ಲಿ ಎಲ್ಲ ಹಳೆಯ ವಾಹನಗಳಿಗೆ (Old Vehicles) ಅತಿ ಸುರಕ್ಷಿತ ನೋಂದಣಿ ಫಲಕ High Security Registration Number Plate- HSRP) ಕಡ್ಡಾಯವಾಗಿ ಅಳವಡಿಸಲು ರಾಜ್ಯ ಸರ್ಕಾರ ನೀಡಿದ ಗಡುವು ಈ ತಿಂಗಳು ಅಂದರೆ ಮೇ 31ಕ್ಕೆ ಅಂತ್ಯವಾಗಲಿದೆ. ಆದರೂ ಸಹ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಸದವರ ವಿರುದ್ಧ ಜೂನ್ 12ರವರೆಗೆ ಯಾವುದೇ ಕ್ರಮವಿಲ್ಲ. ಈ ಬಗ್ಗೆ ಸ್ವತಃ ರಾಜ್ಯ ಸರ್ಕಾರವೇ ಹೈಕೋರ್ಟ್ಗೆ ತಿಳಿಸಿದೆ. ಹೀಗಾಗಿ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳದ ವಾಹನ ಸವಾರರಿಗೆ ಜೂನ್ 12 ಕಾಲಾವಕಾಶವಿದೆ.
ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಇರುವ ಮೇ 31ರ ಗಡುವು ವಿಸ್ತರಣೆ ಕೋರಿ BND ಎನರ್ಜಿ ಲಿಮಿಟೆಡ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಇಂದು (ಮೇ 21) ಹೈಕೋರ್ಟ್ ಮುಂದೆ ಈ ರಿಟ್ ಅರ್ಜಿ ವಿಚಾರಣೆಗೆ ಬಂದಿದೆ. ಆದ್ರೆ, ಹಲವು ರಿಟ್ ಅರ್ಜಿಗಳ ವಿಚಾರಣೆ ಜೂನ್ 11ಕ್ಕೆ ನಿಗದಿಯಾಗಿದೆ. ಹೀಗಾಗಿ ಜೂನ್ 12 ರವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರದ ಪರವಾಗಿ ಎಎಜಿ ರೂಬೆನ್ ಜೇಕಬ್ ಅವರು ಹೈಕೋರ್ಟ್ಗೆ ಹೇಳಿದ್ದಾರೆ. ಎಎಜಿ ರೂಬೆನ್ ಜೇಕಬ್ ಅವರು ಈ ಹೇಳಿಯನ್ನು ದಾಖಲಿಸಿಕೊಂಡ ಹೈಕೋರ್ಟ್ ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿದೆ.
ಸಾರಿಗೆ ಇಲಾಖೆ ಮೊದಲು High Security Registration Plates (HSRP) ನಂಬರ್ ಪ್ಲೇಟ್ ಅಳವಡಿಕೆ ಮಾಡಲು 2023ರ ನವೆಂಬರ್ 17ರ ಗಡುವು ಕೊಟ್ಟಿತ್ತು. ಬಳಿಕ ಅದನ್ನು 2024ರ ಫೆಬ್ರವರಿ 17ರ ತನಕ ವಿಸ್ತರಣೆ ಮಾಡಲಾಗಿತ್ತು, ನಂತರ ಅದನ್ನು ಮೇ 31ರ ವರೆಗೆ ವಿಸ್ತರಿಸಲಾಗಿತ್ತು. ಆದ್ರೆ, ಮತ್ತಷ್ಟು ದಿನ ವಿಸ್ತರಣೆ ಮಾಡುವಂತೆ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರಿಂದ ಇದೀಗ ರಾಜ್ಯ ಸರ್ಕಾರ ಜೂನ್ 12ರ ವರೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ತಿಳಿಸಿದೆ. ಹೀಗಾಗಿ ಇನ್ನೂ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದ ವಾಹನ ಸವಾರರಿಗೆ ಜೂನ್ 12ರ ವರೆಗೆ ಕಾಲಾವಕಾಶ ಸಿಕ್ಕಂತಾಗಿದೆ.