ಉಡುಪಿ: ಹೆಚ್.ಪಿ.ವಿ ಲಸಿಕಾ ಅಭಿಯಾನವನ್ನು ಫೆಬ್ರವರಿ 28 ರಂದು ಪ್ರಾರಂಭಿಸಲಾಗಿದ್ದು, ಸುಮಾರು 1.2 ಕೋಟಿ 14 ವರ್ಷ ವಯಸ್ಸಿನ ಬಾಲಕಿಯರಿಗೆ (14ನೇ ಹುಟ್ಟುಹಬ್ಬ ಆಚರಿಸಿ 15ನೇ ಹುಟ್ಟುಹಬ್ಬ ಆಚರಿಸದ ಬಾಲಕಿಯರು) ಲಸಿಕೆ ನೀಡುವುದು ಇದರ ಉದ್ದೇಶವಾಗಿದೆ. ಈಗಾಗಲೇ ಸುಮಾರು 159 ದೇಶಗಳಲ್ಲಿ ಈ ಲಸಿಕೆಯನ್ನು ನೀಡಲಾಗುತ್ತಿದೆ.
ಗರ್ಭಕಂಠದ ಕ್ಯಾನ್ಸರ್ (Cervical Cancer) ಎಂದರೆ ಗರ್ಭಾಶಯದ ಕೆಳಭಾಗದಲ್ಲಿರುವ ಗರ್ಭಕಂಠದಲ್ಲಿ ಉಂಟಾಗುವ ಕ್ಯಾನ್ಸರ್. ಗರ್ಭಕಂಠದ ಕ್ಯಾನ್ಸರ್ನ ಸುಮಾರು 99.7% ಪ್ರಕರಣಗಳು ಹ್ಯೂಮನ್ ಪ್ಯಾಪಿಲೋಮಾ ವೈರಸ್ ಸೋಂಕಿಗೆ ಸಂಬoಧಿಸಿವೆ.
ಭಾರತದಲ್ಲಿ ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಕ್ಯಾನ್ಸರ್ಗಳಲ್ಲಿ ಸ್ತನ ಕ್ಯಾನ್ಸರ್ ಪ್ರಥಮ ಸ್ಥಾನದಲ್ಲಿದ್ದು, ಗರ್ಭಕಂಠದ ಕ್ಯಾನ್ಸರ್ ದ್ವಿತೀಯ ಸ್ಥಾನದಲ್ಲಿದೆ. ಹೆಚ್.ಪಿ.ವಿ ಲೈಂಗಿಕವಾಗಿ ಹರಡುವ ಸೋಂಕಿಗೆ ಕಾರಣವಾಗುವ ಸಾಮಾನ್ಯವಾಗಿ ಕಂಡುಬರುವ ವೈರಸ್ ಆಗಿದ್ದು, ನಿಕಟ ದೈಹಿಕ ಸಂಪರ್ಕದ ಮೂಲಕ ಹರಡುತ್ತದೆ.
ಲಸಿಕಾಕರಣದ ಪ್ರಮುಖ ಉದ್ದೇಶ ಗರ್ಭಕಂಠದ ಕ್ಯಾನ್ಸರ್ನ್ನು ತಡೆಗಟ್ಟುವುದಾಗಿದೆ. ಸಮಯೋಚಿತವಾಗಿ ಲಸಿಕೆ ಪಡೆಯುವುದರ ಜೊತೆಗೆ ನಿಯಮಿತವಾಗಿ ಗರ್ಭಕಂಠದ ಕ್ಯಾನ್ಸರ್ ತಪಾಸಣೆ (Cervical Screening) ಮಾಡಿಸಿಕೊಳ್ಳುವುದರಿಂದ ಗರ್ಭಕಂಠದ ಕ್ಯಾನ್ಸರ್ನ ಅಪಾಯವನ್ನು ಕಡಿಮೆ ಮಾಡಬಹುದು. ಹೆಚ್.ಪಿ.ವಿ ಲಸಿಕೆಯನ್ನು ಲೈಂಗಿಕವಾಗಿ ಸಕ್ರಿಯರಾಗುವ ಮೊದಲು ನೀಡಿದಾಗ ಉತ್ತಮ ರಕ್ಷಣೆಯನ್ನು ಒದಗಿಸುತ್ತದೆ.
ಈ ಲಸಿಕೆಯನ್ನು ಭಾರತ ಸರ್ಕಾರದ ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ, 14 ವರ್ಷ ವಯಸ್ಸಿನ ಅಂದರೆ 14ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಇನ್ನೂ 15ನೇ ಹುಟ್ಟುಹಬ್ಬವನ್ನು ಆಚರಿಸದಿರುವ ಬಾಲಕಿಯರಿಗೆ ನೀಡಲು ಕ್ರಮವಹಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ ಲಸಿಕೆಯ ಪೂರೈಕೆ ಸೀಮಿತವಾಗಿರುವುದರಿಂದ, ಭಾರತವು ಪ್ರಾರಂಭಿಕ ಹಂತದಲ್ಲಿ 14 ವರ್ಷದ ಬಾಲಕಿಯರ ಮೇಲೆ ಗಮನ ಕೇಂದ್ರೀಕರಿಸಿದೆ. 15 ವರ್ಷ ವಯಸ್ಸಿನ ಗರಿಷ್ಠ ಅರ್ಹತಾ ಮಿತಿಯನ್ನು ತಲುಪುವ ಮೊದಲು ಅವರಿಗೆ ಲಸಿಕೆ ಪಡೆಯುವ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ.
ಇದು ಏಕ ಡೋಸ್ ಲಸಿಕೆಯಾಗಿದ್ದು, ಎಡ ಮೇಲ್ಭುಜಕ್ಕೆ ಇಂಟ್ರಾಮಸ್ಕ್ಯುಲರ್ (Intramuscula)ರೀತಿಯಲ್ಲಿ ನೀಡಲಾಗುತ್ತದೆ. ಅಧ್ಯಯನಗಳ ಪ್ರಕಾರ ಈ ಲಸಿಕೆ ಸುರಕ್ಷಿತವಾಗಿದ್ದು, ಆರೋಗ್ಯಕ್ಕೆ ಯಾವುದೇ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುವುದಿಲ್ಲ.ಉಡುಪಿ ಜಿಲ್ಲೆಯಲ್ಲಿ 8,325 ಮಕ್ಕಳಿಗೆ ಈಗಾಗಲೇ ಲಸಿಕೆಯನ್ನು ನೀಡಲಾಗಿದ್ದು ಇದುವರೆಗೂ ಲಸಿಕೆ ಪಡೆದ ಯಾವುದೇ ಮಕ್ಕಳಲ್ಲಿ ಅಡ್ದಪರಿಣಾಮಗಳು ಉಂಟಾಗಿರುವುದಿಲ್ಲ.
ಜಿಲ್ಲೆಯಲ್ಲಿ ಸಾಕಷ್ಟು ಲಸಿಕೆಯ ಲಭ್ಯತೆ ಇದ್ದು, ಸರಕಾರಿ ಆರೋಗ್ಯ ಸಂಸ್ಥೆಯಲ್ಲಿ (ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ) ಲಸಿಕೆಯನ್ನು ನೀಡಲಾಗುತ್ತಿದೆ.ಮೇ 31 ರವರೆಗೆ ನಡೆಯಲಿದ್ದ ಅಭಿಯಾನವನ್ನು ಲಸಿಕೆ ಪಡೆಯದೇ ಉಳಿದ ಅರ್ಹ ಫಲಾನುಭವಿಗಳಿಗೆ ನೀಡಲು ಹೆಚ್ಚುವರಿಯಾಗಿ ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿತ್ತು.
ಪ್ರಸುತ್ತ ಭಾರತ ಸರ್ಕಾರವು ಅಭಿಯಾನವನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಿದ್ದು, 14ನೇ ಹುಟ್ಟುಹಬ್ಬ ಆಚರಿಸಿರುವ 15 ವರ್ಷ ತುಂಬದ (05-09-2011 ರಿಂದ 31-12-2012) ಬಾಲಕಿಯರು ತಮ್ಮ ಪೋಷಕರೊಂದಿಗೆ ಹತ್ತಿರದ ಸರಕಾರಿ ಆರೋಗ್ಯ ಸಂಸ್ಥೆಯಲ್ಲಿ (ಸಿಸಿಪಿ) ಹೆಚ್.ಪಿ.ವಿ ಲಸಿಕೆಯನ್ನು ಪಡೆಯುವುದರ ಮೂಲಕ ಅಭಿಯಾನದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















