ಮನೆಯಲ್ಲೇ ರುಚಿರುಚಿಯಾದ ಎಗ್ ಬಿರಿಯಾನಿ ಮಾಡುವುದು ಹೇಗೆ.? ಇಲ್ಲಿದೆ ನೋಡಿ ವಿವರ

ಮೊಟ್ಟೆ ಬಿರಿಯಾನಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅಂದಹಾಗೆ ಈ ಬಿಸಿಬಿಸಿಯಾದ ರುಚಿಕರ ಮೊಟ್ಟೆ ಬಿರಿಯಾನಿ ಮಾಡುವುದು ಹೇಗೆ?. ಇದರ ವಿವರ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು: ಮೊಟ್ಟೆ–5, ಟೊಮೆಟೊ–1, ಹಸಿಮೆಣಸು – 4ರಿಂದ 5, ಪುದಿನ – ಸ್ವಲ್ಪ, ಮೊಸರು – 1/4 ಕಪ್‌, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ – 1 ಟೀ ಚಮಚ, ಅರಿಸಿನ – 4 ಚಮಚ, ಖಾರದಪುಡಿ – 1 ಚಮಚ, ಕೊತ್ತಂಬರಿ ಪುಡಿ– 1 ಚಮಚ, ಗರಂಮಸಾಲ – 1 ಚಮಚ, ಕಸೂರಿಮೇಥಿ – 2 ಚಮಚ, ಉಪ್ಪು– ರುಚಿಗೆ ತಕ್ಕಷ್ಟು, ಅಕ್ಕಿ– 250 ಗ್ರಾಂ, ಎಣ್ಣೆ – 4ರಿಂದ 5 ಚಮಚ, ಮಸಾಲೆ ಸಾಮಾನುಗಳು (ಚಕ್ಕೆ, ಲವಂಗ, ಏಲಕ್ಕಿ– 2, ಪಲಾವ್‌ ಎಲೆ – 2, ಮರಾಠಿ ಮೊ‌ಗ್ಗು – 2, ಅನಾನಸ್‌ ಹೂ – 1)

ತಯಾರಿಸುವ ವಿಧಾನ: ಕುಕರ್‌ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮಸಾಲೆ ಸಾಮಾನುಗಳನ್ನು ಹಾಕಿ ಒಂದು ನಿಮಿಷ ಹುರಿಯಿರಿ. ಇದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ, ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಿ. ನಂತರ ಹೆಚ್ಚಿದ ಟೊಮೊಟೊ, ಪುದಿನ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ ಹಾಕಿ, ಟೊಮೆಟೊ ಮೆತ್ತಗಾಗುವವರೆಗೂ ಬಾಡಿಸಿಕೊಳ್ಳಿ.

ಅರಿಸಿನ, ಖಾರದಪುಡಿ, ಕೊತ್ತಂಬರಿ ಪುಡಿ, ಗರಂಮಸಾಲೆ, ಕಸೂರಿಮೇಥಿ, ಉಪ್ಪು ಹಾಕಿ ಕೈಯಾಡಿಸಿ. ಈಗ ಮೊಸರು ಹಾಕಿ ತಿರುಗಿಸಿ, ಎಣ್ಣೆ ಬಿಡುವವರೆಗೂ ತಿರುವುತ್ತಿರಬೇಕು. ಎಣ್ಣೆ ಬಿಟ್ಟ ನಂತರ ಅರ್ಧ ಲೋಟ ನೀರು ಹಾಕಿ ಕುದಿಸಿ. ಕುದಿ ಬಂದ ನಂತರ ಒಂದೊಂದೇ ಮೊಟ್ಟೆಯನ್ನು ಒಡೆದು ಒಂದರ ಪಕ್ಕ ಒಂದರಂತೆ ಬಿಡಬೇಕು.

ಮೊಟ್ಟೆ ಬೇಯುವವರೆಗೂ ಯಾವುದೇ ಕಾರಣಕ್ಕೂ ಕೈ ಆಡಿಸಬಾರದು. ಮೊಟ್ಟೆ ಬೆಂದ ನಂತರ 2 ಲೋಟ ನೀರು ಹಾಕಿ, ನೀರು ಕುದಿ ಬಂದ ನಂತರ ನೆನೆಸಿಟ್ಟ ಅಕ್ಕಿಯನ್ನು ಹಾಕಿ, ಕುಕರ್‌ ಮುಚ್ಚಳ ಮುಚ್ಚಿ ಎರಡು ವಿಷಲ್‌ ಕೂಗಿಸಿ. ಈಗ ಬಿಸಿಬಿಸಿಯಾದ ರುಚಿಕರ ಮೊಟ್ಟೆ ಬಿರಿಯಾನಿ ಸವಿಯಲು ರೆಡಿ. ಇದನ್ನು ಮೊಸರು ಬಜ್ಜಿಯೊಂದಿಗೆ ಸೇವಿಸಿದರೆ ಅದರ ಖುಷಿಯೇ ಬೇರೆ. ಇನ್ಯಾಕೆ ತಡ, ಒಮ್ಮೆ ಟ್ರೈ ಮಾಡಿ ನೋಡಿ.!