ಮಂಗಳೂರು: ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಕುಖ್ಯಾತ ಆರೋಪಿಯನ್ನು ಬಂಧಿಸಿ, ಸುಮಾರು ₹13 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಕಾಂಞಗಾಡಿನ ಗಾರ್ಡ್ರವಲಪ್ಪಿಲ್ ನಿವಾಸಿ ಆಶಿಫ್ ಪಿ.ಎಚ್. (25) ಎಂದು ಗುರುತಿಸಲಾಗಿದೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ 2/3ನೇ ಪ್ಲಾಟ್‌ಫಾರ್ಮ್‌ನಲ್ಲಿ ಶಂಕಾಸ್ಪದವಾಗಿ ಸಂಚರಿಸುತ್ತಿದ್ದ ಆಶಿಫ್‌ನನ್ನು RPF ಹಾಗೂ ಸಿಐಬಿ ಸಿಬ್ಬಂದಿ ತಡೆದು ವಿಚಾರಣೆ ನಡೆಸಿದರು. ಬಳಿಕ ಬ್ಯಾಗ್ ತಪಾಸಣೆ ಮಾಡಿದಾಗ, ದಾಖಲೆಗಳಿಲ್ಲದ ಚಿನ್ನಾಭರಣಗಳು ಪೌಚ್ ಒಂದರಲ್ಲಿ ಪತ್ತೆಯಾದವು.
ಪರಿಶೀಲನೆ ವೇಳೆ, ತ್ರಿಶೂರ್ ಜಿಲ್ಲೆಯ ಪಾವರಟ್ಟಿ ಪ್ರದೇಶದ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಈ ಚಿನ್ನಾಭರಣಗಳು ಸಂಬಂಧಪಟ್ಟಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಈ ಕುರಿತು ಪಾವರಟ್ಟಿ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.516/2026 ಅಡಿಯಲ್ಲಿ ಪ್ರಕರಣ ದಾಖಲಾಗಿರುವುದು ದೃಢಪಟ್ಟಿದೆ.
ಬಂಧಿತನಿಂದ ನಾಲ್ಕು ಬಳೆಗಳು, ಮೂರು ಹಾರಗಳು, ನಾಲ್ಕು ಉಂಗುರಗಳು, ಒಂದು ಚೈನ್, ಒಂದು ಬ್ರೇಸ್ಲೆಟ್ ಹಾಗೂ ಒಂದು ಜೋಡಿ ಸ್ಟಡ್ಸ್ ಸೇರಿದಂತೆ ಒಟ್ಟು 93.5 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ₹13,06,662 ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಹಾಗೂ ವಶಪಡಿಸಿಕೊಂಡ ಚಿನ್ನಾಭರಣವನ್ನು ಮುಂದಿನ ಕ್ರಮಕ್ಕಾಗಿ ಪಾವರಟ್ಟಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ, ಆರೋಪಿಯು ಎರ್ನಾಕುಳಂನಿಂದ ಕಾಸರಗೋಡುವರೆಗೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಹಲವು ಮನೆ ಕಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಆತನ ವಿರುದ್ಧ ಹಲವು ಬಾಕಿ ವಾರಂಟ್‌ಗಳೂ ಇರುವುದಾಗಿ ತಿಳಿದುಬಂದಿದೆ.

















