ಸುತ್ತೋಕ್ ಆಸೆ ಇದ್ದವರು ಈ ತಾಣಕ್ಕೆ ಬರಲೇಬೇಕು: ವೀಕೆಂಡ್ ವಿಹಾರಕ್ಕೆ ಬೊಂಬಾಟ್,  ಇದು ಪ್ರವಾಸಿಗರ ಹಾಟ್ ಸ್ಪಾಟ್

ಏಕಾಂತಕ್ಕೆ ಇದೊಂದು ಬೆಸ್ಟ್ ಸ್ಪಾಟ್, ಬ್ಯುಸಿ ಲೈಫ್ ನಿಂದ ಒಂದಷ್ಟು ಮುಕ್ತಿ ಬೇಕು, ಕುಟುಂಬದ ಸದಸ್ಯರ ಜೊತೆಗೆ ಸಮಯ ಕಳೆಯುತ್ತಾ ಸುಮಧುರ ಕ್ಷಣಗಳನ್ನು ಎಂಜಾಯ್ ಮಾಡಬೇಕು ಎನ್ನುವವರಿಗೆ ಈ ಸ್ಥಳ, ಸ್ವರ್ಗ. ಹೌದು ಉಡುಪಿ ಜಿಲ್ಲೆ ಅಂದ್ರೆ  ಚೆಂದದ ಕಡಲುಗಳ ಊರು,ಇಲ್ಲಿರುವ ಕಡಲುಗಳು ಎಲ್ಲವೂ ಒಂದೇ ತರ ಕಂಡರೂ, ಬೇರೆ ಬೇರೆ ಹೆಸರುಗಳಿಂದ ಫೇಮಸ್ ಆದ ಕಡಲ ತೀರ ಅದರದ್ದೇ ಆದ ವೈಶಿಷ್ಟ್ಯತೆ ಹೊಂದಿದೆ. ಆದರೆ ನದಿ ಕಡಲಿಗೆ ಸೇರುವ ಜಾಗವಿದೆಯಲ್ವಾ, ಅದು ಕೊಡುವ ಖುಷಿಯೇ ಬೇರೆ. ಉಡುಪಿ ಜಿಲ್ಲೆಯ ಸಂತೆಕಟ್ಟೆ ಸಮೀಪವಿರುವ ಕೊಡಿ ಬೇಂಗ್ರೆ, ಇಂತಹ ಅದ್ಬುತ ತಾಣಗಳಲ್ಲೊಂದು.

ಸೀತೆ ಕಡಲಿಗೆ ಸೇರುವ ಜಾಗ:

ಉಡುಪಿಯಿಂದ ಸಂತೆಕಟ್ಟೆ, ಅಲ್ಲಿಂದ ಒಂದಷ್ಟು ದೂರವಿರುವ ಮನಮೋಹಕ ಪ್ರದೇಶದಲ್ಲಿ ಸಿಗುತ್ತದೆ ಕೊಡಿ ಬೇಂಗ್ರೆ ಎನ್ನುವ ಸುಂದರ ತಾಣ,  ಕೊಡಿ ಪಂಚಾಯತ್ ವ್ಯಾಪ್ತಿಗೆ ಸೇರುವ ಈ ಪ್ರದೇಶ, ಅಪರೂಪದ ಶಾಂತತೆಯಿಂದ ಕೂಡಿದೆ.ನೂರಾರು ತೆಂಗಿನಮರಗಳ ನೆರಳುಗಳನ್ನು ದಾಟಿ ಕೊಡಿ ಬೆಂಗ್ರೆಗೆ ತಲುಪಿ ಕಣ್ಣು ಹಾಯಿಸಿದರೆ, ಎದುರಿಗೆ ಹರಿಯುತ್ತಿರುವುದು ಸಮುದ್ರವೋ, ಅಥವಾ ಸಮುದ್ರದಂತಿರುವ ಕಡಲೋ? ಎನ್ನುವುದು ಒಂದು ಕ್ಷಣಕ್ಕೆ ತಿಳಿಯುವುದಿಲ್ಲ. ಇಲ್ಲಿಯೇ ಸೀತಾನದಿ ಕಡಲಿಗೆ ಸೇರಿ ಸಮುದ್ರವಾಗುತ್ತಾಳೆ. ಸೀತಾನದಿಯ ಚೆಲುವು, ಕಡಲಿಗೆ ಸೇರಿ ಈ ತಾಣ ಇನ್ನಷ್ಟು ಮನಮೋಹಕವಾಗಿ ಕಾಣುತ್ತದೆ. ಈ ಪ್ರದೇಶದಲ್ಲಿ ಹಿನ್ನೀರಿನ ಚೆಲುವು,ಮರಳಿನ ನುಣುಪು ಪ್ರವಾಸಿಗರಿಗೆ, ಪರಿಸರ ಪ್ರೇಮಿಗಳಿಗೆ ಮಜಾ ನೀಡುತ್ತದೆ.

ಇಲ್ಲಿನ ಪ್ರಕೃತಿ ಚೆಲುವು ಒಂದು ತರ ವಿಶಿಷ್ಟ, ಸುಂದರ. ಈಗಿನ ಕಾಲದ ಮಂದಿಯ ಬಾಯಲ್ಲಿ ಈ ಸ್ಥಳಕ್ಕೆ ಡೆಲ್ಟಾ ಬೀಚ್ ಎನ್ನುವ ನಾಮಕರಣವಾಗಿದೆ.

ಎಲ್ಲರ ಹಾಟ್ ಸ್ಪಾಟ್:

ದಿನೇ ದಿನೇ ಈ ಸಮುದ್ರ ನೋಡುವ ಆಸೆಗೆಂದೇ ಇಲ್ಲಿ ಬರುವ ಪ್ರವಾಸಿಗರು ಜಾಸ್ತಿ, ದೂರದ ಊರುಗಳಿಂದ ಕಡಲ ಚಂದವನ್ನು ಸವಿಯಲು ಬಂದು, ವಾವ್ ವಾವ್ ಎನ್ನುವವರು ಇದ್ದಾರೆ. ಪ್ರೇಮಿಗಳು ಕೂಡ ಏಕಾಂತದಲ್ಲಿ ಈ ಪ್ರದೇಶದ  ರಮಣೀಯತೆಯನ್ನು ಅನುಭವಿಸುತ್ತಾ ಪ್ರೀತಿಯಲ್ಲೇ ಖುಷಿಪಡುತ್ತಾರೆ. ಒಟ್ಟಾರೆ ಬಿಡುವಿದ್ದಾಗ ಕುಟುಂಬದ ಸದಸ್ಯರ ಜೊತೆಗೂ ಇಲ್ಲಿ ಬಂದರೆ ಮನಸ್ಸು ಪ್ರಶಾಂತವಾಗುವುದು ಗ್ಯಾರಂಟಿ. ನಿಮ್ಮ ವಿಕೆಂಡ್ ಪ್ರವಾಸದ ಲೀಸ್ಟ್ ನಲ್ಲಿ ಈ ಜಾಗ ಕೂಡ ಸ್ಥಾನಪಡೆಯಲಿ.

 

ಬೇರೇನು ಆಕರ್ಷಣೆ?

ಇಲ್ಲಿ “ಕಲಿ” ಫೇಮಸ್, ಇಲ್ಲಿನ ಕಲಿಯ ಟೇಸ್ಟ್ ನೋಡಲೆಂದೇ ಬರುವವರಿಗೇನೂ ಕಮ್ಮಿ ಇಲ್ಲ. ಕಡಲಲ್ಲಿ ಒಂದಷ್ಟು ದಿನ ಕಳೆಯಬೇಕು ಎನ್ನುವವರಿಗೆ ಇಲ್ಲಿ  ಐಷಾರಾಮಿ ಮನೆಗಳಂತಹ ಬೋಟುಗಳು ಲಭ್ಯವಿದೆ.ಅದರಲ್ಲಿ ಕಡಲು ಸುತ್ತಲು ಅವಕಾಶವಿದೆ.

ಎಷ್ಟು ದೂರ?

ಉಡುಪಿಯಿಂದ  ಸುಮಾರು 7 ಕಿ.ಮೀ ದೂರದ ಸಂತೆಕಟ್ಟೆಗೆ ಬಂದರೆ ಅಲ್ಲಿಂದ ಸುಮಾರು 10 ಕಿ.ಮೀ ದೂರವಿದೆ ಕೊಡಿ ಬೇಂಗ್ರೆ.

ಇಲ್ಲಿಗೆ ಉಡುಪಿ ಸಿಟಿ ಬಸ್ ಸ್ಟಾಪ್ ನಿಂದ ಸರಕಾರಿ ಹಾಗೂ ಖಾಸಗಿ ಬಸ್ ಸೇವೆ ಲಭ್ಯವಿದೆ. ಸ್ವಂತ ವಾಹನದಲ್ಲಿ ಬಂದರೂ ಅನುಕೂಲ.