ಮಂಗಳೂರು: ಮಂಗಳೂರಿನ ಫನ್ನೀರ್ ಎಂಎಫ್ ಸಿ ಹೋಟೆಲ್ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ಇಂದು ಸಂಜೆ ನಡೆದಿದೆ.
ಗ್ರಾಹಕರ ಸೋಗಿನಲ್ಲಿ ಸಮೋಸ ಖರೀದಿಸಲು ಬಂದ ದುಷ್ಕರ್ಮಿಗಳು ಹೋಟೆಲ್ ಸಿಬ್ಬಂದಿಯ ಜತೆ ವಿನಾ ಕಾರಣ ಜಗಳ ತೆಗೆದಿದ್ದಾರೆ. ಈ ವೇಳೆ ಕೆಲ ಸಮಯ ಹೋಟೆಲ್ ಸಿಬ್ಬಂದಿ ಹಾಗೂ ಅಪರಿಚಿತರ ದುಷ್ಕರ್ಮಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಬಳಿಕ ಕಿಡಿಗೇಡಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಹೋಟೆಲ್ ನ ಇಬ್ಬರು ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಎರಡು ಸುತ್ತು ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಕಿಡಿಗೇಡಿಗಳನ್ನು ಹಿಡಿಯಲು ಹೋಟೆಲ್ ಸಿಬ್ಬಂದಿ ಯತ್ನಿಸಿದ್ದಾರೆ. ಪರಾರಿಯಾಗುತ್ತಿದ್ದ ನಾಲ್ವರು ದುಷ್ಕರ್ಮಿಗಳ ಪೈಕಿ ಇಬ್ಬರನ್ನು ಸ್ಥಳೀಯರು ಸೆರೆಹಿಡಿದಿದ್ದಾರೆ.
ಮತ್ತಿಬ್ಬರು ಆಟೊ ರಿಕ್ಷಾದಲ್ಲಿ ಪರಾರಿಯಾಗಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ಹೋಟೆಲ್ ಗಾಜು, ಪೀಠೋಪಕರಣ ಧ್ವಂಸ ಆಗಿದೆ. ಮಂಗಳೂರಿನ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.