ಮಂಗಳೂರು: ದಿನಬಳಕೆ ವಸ್ತುಗಳ ಬೆಲೆ ಹಾಗೂ ಹಾಲಿನ ಬೆಲೆ ಏರಿರುವ ಹಿನ್ನಲೆಯಲ್ಲಿ ಆಗಸ್ಟ್ 1 ರಿ೦ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಟೇಲ್‌ಗಳಲ್ಲಿ ತಿಂಡಿ ತಿನಿಸುಗಳ ಬೆಲೆಯನ್ನು ಶೇ.10 ರಷ್ಟು ಹೆಚ್ಚಳ ಮಾಡಲು ಹೊಟೇಲ್ ಮಾಲೀಕರ ಸಂಘದ ದ.ಕ.ಜಿಲ್ಲಾ ಘಟಕವು ತೀರ್ಮಾನಿಸಿದೆ. ಆದರೆ ಬೆಲೆ ಏರಿಕೆಯ ನಿರ್ಧಾರದ ತೀರ್ಮಾನವನ್ನು ಆಯಾ ಹೊಟೇಲ್‌ಗಳಿಗೆ ಬಿಡಲಾಗಿದೆ.
ಪ್ರಸ್ತುತ ಹಾಲಿನ ದರವು ಎರಡೆರಡು ಬಾರಿ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 6 ರೂ ನಷ್ಟು ಹೆಚ್ಚಳ ಕಂಡಿದೆ. ಅಲ್ಲದೆ ತರಕಾರಿ, ಬೇಳೆ ಕಾಳು, ಕಚ್ಚಾವಸ್ತುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್-ಡೀಸೆಲ್, ಸಿಲಿಂಡರ್ ದರವೂ ಏರಿಳಿತದಲ್ಲಿದೆ. ಹೊಟೇಲ್ ಮಾಲೀಕರಿಗೆ ಇದರಿಂದ ಹೊರೆಯಾಗುತ್ತಿದೆ. ಕಳೆದ ಒಂದು ವರ್ಷದಿಂದ ತಿಂಡಿ ತಿನಿಸುಗಳ ದರ ಏರಿಕೆ ಮಾಡಿರಲಿಲ್ಲ, ಈಗ ಅನಿವಾರ್ಯವಾಗಿ ದರ ಏರಿಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ ಶೆಣೈ ಹೇಳಿದ್ದಾರೆ.
ಹೋಟೆಲ್ ಕೆಲಸಗಾರರಿಗೆ ತುಟ್ಟಿಭತ್ಯೆ ಸೇರಿದಂತೆ 4,000 ರೂ ಗಳಷ್ಟು ಸಂಬಳ ಹೆಚ್ಚಿಸಲಾಗಿದೆ. ಹೀಗಾಗಿ ಎಲ್ಲ ಹೊಟೇಲ್ ಗಳಲ್ಲೂ ತಿಂಡಿ ತಿನಿಸುಗಳ ದರ ಏರಿಕೆಗೆ ನಿರ್ಧರಿಸಲಾಗಿದೆ. ಆದರೂ ಬೆಲೆ ಏರಿಕೆಯ ನಿರ್ಧಾರವನ್ನು ಆಯಾ ಹೊಟೇಲ್‌ಗಳ ತೀರ್ಮಾನಕ್ಕೆ ಬಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.