ಅರ್ಪಿತಾ ನೆರಿಯ
ಪ್ರಥಮ ಪತ್ರಿಕೋದ್ಯಮ
ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ
ಹಾಸ್ಟೆಲ್ ಜೀವನ ಒಂದು ಮುಗಿಯದ ನೆನಪು ಹಾಗೂ ಮಧುರವಾದ ಪಯಣ. ಹಾಸ್ಟೆಲ್ ಜೀವನದ ಸಿಹಿ ಕಹಿ ನೆನಪನ್ನು ಹಾಸ್ಟೆಲ್ ವಾಸಿಯಾಗಿದ್ದವರು ಮೆಲುಕು ಹಾಕುತ್ತಲೇ ಇರುತ್ತಾರೆ ಬಿಡಿ.
ಹಾಸ್ಟೆಲ್ ಎಂದರೆ ಕೋಪ, ಜಗಳ, ಸಂತೋಷ, ಹಾಗೂ ತರ್ಲೆಗಳ ಪಾಠಶಾಲೆ. ಒಮ್ಮೆ ಹಾಸ್ಟೆಲ್ ಜೀವನ ಮುಗಿದರೆ ಮುಂದೆಂದೂ ಬೇಕು ಬೇಕು ಎಂದರೂ ಅದು ಮತ್ತೆಂದೂ ಮರಳಿಬಾರದು.
ನಾನು ಕೂಡ ಹಾಸ್ಟೆಲ್ ಕುಟುಂಬದ ಸದಸ್ಯೆ. ಮನೆ ಎಂಬ ಹಕ್ಕಿ ಗೂಡಿನಿಂದ ಹಾಸ್ಟೆಲ್ ಎಂಬ ಅದ್ಭುತ ಜಗತ್ತಿಗೆ ಕಾಲಿಟ್ಟದ್ದೇ ಹೈಸ್ಕೂಲ್ ಜೀವನದಲ್ಲಿ. ಹೇಳಿ ಕೇಳಿ ಹೈಸ್ಕೂಲ್ ಹರೆಯ, ತಿಳಿದೂ ತಿಳಿಯದ ವಯಸ್ಸು. ಈ ವಯಸ್ಸಿನಲ್ಲಿ ನಮ್ಮದು ಬಣ್ಣ ಬಣ್ಣದ ಬದುಕು, ಸರಿ ತಪ್ಪುಗಳು ಅರಿವಿಗೆ ಬರುವುದಿಲ್ಲ. ಈ ಸಮಯದಲ್ಲಿ ಹಾಸ್ಟೆಲ್‌ನಲ್ಲಿ ಗೆಳತಿಯರೊಂದಿಗೆ ಸೇರಿಕೊಂಡು ಮಾಡಿದ ತರ್ಲೆಗಳೆಷ್ಟು, ಜಗಳಗಳೆಷ್ಟು, ಕೆಲವು ವಿಷಯಗಳಲ್ಲಿ ಗೆಳತಿಯರೊಂದಿಗೆ ಮಹಾಯುದ್ಧಕ್ಕೆ ನಿಂತು ಬಿಡುತ್ತಿದ್ದೆ. ಆದರೂ ನಮ್ಮ ಬಾಂಧವ್ಯ ತುಂಬಾ ಗಟ್ಟಿ ಇರುತ್ತಿತ್ತು.
ನಾವು ಹಾಸ್ಟೆಲ್‌ನಲ್ಲಿ ಇರಬೇಕಾದರೆ ಬಾಲವಿಲ್ಲದ ಕೋತಿಗಳ ಹಾಗೆ ಇರುತ್ತಿದ್ದೆವು. ಅದೆಷ್ಟೋ ತುಂಟಾಟಗಳನ್ನು ಮಾಡಲು ಹೋಗಿ ವಾರ್ಡನ್ ಕೈಯಲ್ಲಿ ಬೈಯಿಸಿಕೊಂಡು ರೂಮಿಗೆ ಬಂದು ಹಾಸ್ಯ ಮಾಡಿ ನಗುತ್ತಿದ್ದ ಸಂದರ್ಭಗಳೂ ಇವೆ. ಹತ್ತನೇ ತರಗತಿಗೆ ಬಂದಂತೆ ನಮ್ಮ ತರ್ಲೆಗಳು ಜಾಸ್ತಿಯಾಗುತ್ತಾ ಬಂತು. ಯಾಕೆಂದರೆ ನಾವೇ ಸೀನಿಯರ್ಸ್ ಎಂಬ ಜಂಬ ನಮ್ಮಲ್ಲಿತ್ತು.
ಒಮ್ಮೆ ಅಡುಗೆಯವರು ಸ್ನಾನ ಮಾಡಲು ಹೋದ ಸಮಯವನ್ನು ಬಳಸಿಕೊಂಡು ಅಡುಗೆ ರೂಮಿಂದ ತಿಂಡಿ, ಹುಣಸೆಹುಳಿಯನ್ನು ತಿಂದ ಘಟನೆ ಹಾಗೇ ಅಚ್ಚೊತ್ತಿದೆ. ಹಾಗೆಯೇ ನಮ್ಮ ಹಾಸ್ಟೆಲ್ ಪಕ್ಕದ ಅಂಗಡಿಯಲ್ಲಿ ತೂಗುಹಾಕಿರುವ ತಿಂಡಿಗಳು ನಮ್ಮನ್ನು ಕೈಬೀಸಿ ಕರೆಯುತ್ತಿದ್ದಾಗ ಬಾಯಲ್ಲಿ ನೀರೂರಿಸಿದ್ದು, ಮಧ್ಯಾಹ್ನದ ವೇಳೆ ಎಲ್ಲರು ಮಲಗಿರುವಾಗ ಕಂಪೌನ್ಡ್ ಹಾರಿ ತಿಂಡಿ ತಂದು ಎಲ್ಲರೂ ಹಂಚಿಕೊಂಡು ತಿಂದಿದ್ದು ಇವೆಲ್ಲ ನೆನೆವಾಗೆಲ್ಲ ಮನಸ್ಸು ಖುಷಿಯಿಂದ ಒದ್ದೆಯಾಗುತ್ತದೆ.
ಹಾಸ್ಟಲ್‌ನಲ್ಲಿ ಇರುವಾಗ ನಾವೇ ಶ್ರೇಯಘೋಶಾಲ್, ಅನುರಾಧಾ ಭಟ್. ನಮ್ಮದೇ ಸಾಹಿತ್ಯ ಹೊಂದಿರುವ ಹಾಡುಗಳನ್ನು ಹಾಡುತ್ತಾ ಒಬ್ಬರನ್ನೊಬ್ಬರು ಗೇಲಿ ಮಾಡುತ್ತಾ ಖುಶಿಪಡುತ್ತಾ ಇರೋ ಮಜಾನೇ ಬೇರೆ. ಇವೆಲ್ಲದರ ನಡುವೆ ೨ ವರ್ಷ ಕಳೆದದ್ದೆ ತಿಳಿಯಲಿಲ್ಲ. ಪರೀಕ್ಷೆಗಳು ಸರಣಿಯಾಗಿ ಬರತೊಡಗಿದವು. ಎಲ್ಲರೂ ಗಂಭೀರವಾಗಿ ಓದಲು ಪ್ರಾರಂಭಿಸಿದೆವು. ಆದರೂ ಸಣ್ಣ ಪುಟ್ಟ ತರ್ಲೆಗಳನ್ನು ಬಿಡಲಿಲ್ಲ. ನೋಡು ನೋಡುತಿದ್ದಂತೆ ಹಾಸ್ಟೆಲ್‌ನಲ್ಲಿ ಬೀಳ್ಕೊಡುಗೆ ಸಮಾರಂಭ ನಡೆದೇ ಹೋಯಿತು. ನಾವೆಲ್ಲರೂ ಸುಖ ದುಃಖಗಳನ್ನು ಹಂಚಿಕೊಂಡು ನಮ್ಮ ಇನ್ನೊಂದು ಮನೆಯಂತಿದ್ದ ಹಾಸ್ಟೆಲ್ ಅನ್ನು
ಗೆಳತಿಯರನ್ನು ಬಿಟ್ಟು ಹೋಗಲು ಮನಸ್ಸಿಲ್ಲದಿದ್ದರಿಂದ ಬೀಳ್ಕೊಡುಗೆಯ ದಿನ ಕಣ್ಣೀರಿನ ಮಳೆಯೇ ಸುರಿಸಿದೆವು. ನಂತರ ಪರೀಕ್ಷೆ ಬರೆದು ನಮ್ಮ ಹಾಸ್ಟೆಲ್‌ಗೆ ಶೇ.99 ಫಲಿತಾಂಶ ತಂದುಕೊಟ್ಟೆವು. ಹೀಗೆ ಕಳೆದು ಹೋದವು ನಮ್ಮ ಹೈಸ್ಕೂಲ್ ಹಾಸ್ಟೆಲ್ ಜೀವನ. ಜೀವನದಲ್ಲಿ ಹಾಸ್ಟೆಲ್‌ನ ಅನುಭವ, ಹಾಸ್ಟೆಲ್ ಕಲಿಸಿದ ಪಾಠ ಎಲ್ಲವೂ ಮಾದರಿ. ಅಲ್ಲಿ ಕಳೆದ ಪ್ರತಿ ದಿನವೂ ನಮ್ಮ ಕಡೆಯ ಕ್ಷಣದವರೆಗೂ ಶಾಶ್ವತ. ಆದರೂ ಆ ದೇವರಲ್ಲಿ ನನ್ನದೊಂದು ಚಿಕ್ಕ ಪ್ರಾರ್ಥನೆ- ನಾವೆಲ್ಲ ಒಂದಾಗಿ ಒಟ್ಟಿಗೆ ಕಳೆದ ಆ ದಿನಗಳು ಮತ್ತೊಮ್ಮೆ ನಮ್ಮ ಬಾಳಿನಲ್ಲಿ ಸಿಗಬಾರದೇ?
.