ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ: ಹೊಸಾಡು ಗ್ರಾ.ಪಂ ನಿರ್ಲಕ್ಷ್ಯಕ್ಕೆ ಭತ್ತದ ಕೃಷಿ ಸರ್ವನಾಶ:

ಕುಂದಾಪುರ: ಇಲ್ಲಿನ ಮುಳ್ಳಿಕಟ್ಟೆ ಸಮೀಪದ ಹೊಸಾಡು ಗ್ರಾಮಪಂಚಾಯಿತಿ ವ್ಯಾಪ್ತಿಯ ಮೂಡುಬೈಲು ಕೃಷಿ ಗದ್ದೆಯಲ್ಲಿ ಕಟಾವು ಮಾಡಿ ಇಟ್ಟಿದ್ದ ಭತ್ತದ ಪೈರಿಗೆ ಏಕಾಏಕಿ ಉಪ್ಪು ನೀರು ನುಗ್ಗಿದ ಪರಿಣಾಮ ಸುಮಾರು ಐದು ಎಕರೆಯಷ್ಟು ಕೃಷಿ ನಾಶವಾಗಿದೆ.

ಮಳೆಗಾಲದ ತೀವ್ರ ನೆರೆಯಲ್ಲೂ ರೈತರು ಕಷ್ಟಪಟ್ಟು ರಕ್ಷಿಸಿ, ಪೋಷಿಸಿಕೊಂಡು ಬಂದಿದ್ದ ಭತ್ತದ ಪೈರು ಇದೀಗ ಉಪ್ಪು ನೀರಿನ ಹಾವಳಿಗೆ ಬಲಿಯಾಗುವ ಮೂಲಕ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತಾಗಿದೆ.

ಹುಣ್ಣೆಮೆ-ಅಮವಾಸ್ಯೆ ಸಮಯದಲ್ಲಿ ಉಬ್ಬರ-ಇಳಿತಕ್ಕೆ ಸ್ವಲ್ಪ ಮಟ್ಟಿಗೆ ಕೃಷಿ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿದ್ದು, ಎಂದಿಗೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಉಪ್ಪು ನೀರು ನುಗ್ಗಿದ ಉದಾಹಾರಣೆಗಳಿಲ್ಲ. ಭತ್ತದ ಗದ್ದೆಯಲ್ಲಿ ಮೊಣಕಾಲು ಮಟ್ಟದಲ್ಲಿ ನೀರು ನಿಂತಿದ್ದರಿಂದ ಭತ್ತ ಕಟಾವು ಮಾಡಿ ಇಟ್ಟಿದ್ದ ಭತ್ತದ ಪೈರಿನ ಮೇಲೆ ನೀರು ನಿಂತಿದ್ದರಿಂದ ಹುಲ್ಲು ಹಾಳಾಗುವ ಜೊತೆಗೆ ಭತ್ತವೂ ನಷ್ಟವಾಗಿದೆ. ಅಲ್ಲದೇ ಕದ್ದೆಗಳೆಲ್ಲಾ ಒಣಗಿ ಕಟಾವಿಗೆ ಸಜ್ಜಾಗಿದ್ದ ಭತ್ತದ ಪೈರು ಕೂಡ ಉಪ್ಪು ನೀರಿನ ಹಾವಳಿಗೆ ನಾಶವಾಗಿದೆ ಎಂದು ಈ ಭಾಗದ ಕೃಷಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ನದಿ ತೀರದಲ್ಲಿ ಬದು ನಿರ್ಮಿಸದರೆ ಇರುವುದುರಿಂದ ಪ್ರತೀ ಬಾರಿಯೂ ಇದೇ ರೀತಿ ಸಮಸ್ಯೆ ತಲೆದೋರುತ್ತಿದ್ದು, ಆದಷ್ಟು ಬೇಗ ಜನಪ್ರತಿನಿಧಿಗಳು ನದಿ ತೀರ ಬದು ನಿರ್ಮಿಸಿ ಶಾಶ್ವತ ಪರಿಹಾರ ಒದಗಿಸಲು ಆಗ್ರಹಿಸಿದ್ದಾರೆ.

ಗ್ರಾ.ಪಂ ಬೇಜವಾಬ್ದಾರಿಯೇ ಕಾರಣ: ಆರೋಪ
ಕೃಷಿ ಗದ್ದೆಗೆ ನೀರು ನುಗ್ಗಲು ಹೊಸಾಡು ಗ್ರಾ.ಪಂ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಲಾಗಿದ್ದು, ಅರಾಟೆ ಬಳಿ ಸೌಪರ್ಣಿಕಾ ನದಿಗೆ ನಿರ್ಮಿಸಿದ ಕಿರು ಅಣೆಕಟ್ಟಿನ ಹಲಗೆ ಜೋಡಣೆ ಕಾರ್ಯ ಸರಿಯಾಗಿ ನಡೆಯದಿರುವುದೆ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವಾಗಿದೆ. ಆ ಭಾಗದಲ್ಲಿರುವ ಕಿರುಅಣೆಕಟ್ಟು ಸಾಕಷ್ಟು ಶಿಥಿಲಗೊಂಡಿದ್ದು, ಗಾ.ಪಂ ಕಿಂಡಿ ಅಣೆಕಟ್ಟು ದುರಸ್ತಿ ಮಾಡಿ, ಕೃಷಿ ಗದ್ದೆಗಳಿಗೆ ಉಪ್ಪು ನೀರು ನುಗ್ಗದಂತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.