ಮಂಗಳೂರು: ಹಿಂದೂ ಸಂಘಟನೆಯ ಮುಖಂಡರನ್ನು ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲು ಕಿಡಿಗೇಡಿಗಳ ತಂಡವೊಂದು ವಿಫಲ ಯತ್ನ ನಡೆಸಿದ ಘಟನೆ ಪುತ್ತೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಫೇಸ್ ಬುಕ್ ನಲ್ಲಿ ಅಪರಿಚಿತ ಯುವತಿಯೊಬ್ಬಳು ಫ್ರೆಂಡ್ ರಿಕ್ವೇಸ್ಟ್ ಕಳುಹಿಸಿ, ಆ ಮೂಲಕ ಹನಿಟ್ರ್ಯಾಪ್ ಗೆ ಸೆಳೆಯಲು ವಿಫಲ ಯತ್ನ ನಡೆಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಹಿಂದೂ ಜಾಗರಣ ವೇದಿಕೆಯ ಮುಖಂಡ ಬಿ. ಗಣರಾಜ್ ಭಟ್ ಅವರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಲು ಸಂಚು ರೂಪಿಸಿದ ಘಟನೆ ಸೋಮವಾರ ನಡೆದಿದೆ. ಅವರಿಗೆ ಫೇಸ್ ಬುಕ್ ನಲ್ಲಿ ಅಪರಿಚಿತ ಯುವತಿಯೊಬ್ಬಳ ಖಾತೆಯಿಂದ ಫ್ರೆಂಡ್ ರಿಕ್ವೇಸ್ಟ್ ಬಂದಿದೆ. ಆದರೆ ಅವರು ಫ್ರೆಂಡ್ ರಿಕ್ವೇಸ್ಟ್ ಸ್ವೀಕರಿಸದೆ, ಮೆಸೇಂಜರ್ ನಲ್ಲಿ ನೀವು ಯಾರು ಎಂದು ಕೇಳಿದ್ದಾರೆ.
ಆಗ ಆಕೆ ನಿಮ್ಮ ವಾಟ್ಸಾಪ್ ನಂಬರ್ ಕೊಡಿ ಎಂದು ಕೇಳಿದ್ದಾಳೆ. ಇವರು ಮತ್ತೆ ನೀವು ಯಾರು ಎಂದು ಕೇಳಿದ್ದಾರೆ. ಆಕೆ, ನಾನು ಮುಂಬೈನಿಂದ ಮಾತನಾಡುವುದು. ನೀವು ನಂಬರ್ ಕೊಡಿ, ನಾವು ವಿಡಿಯೋ ಕಾಲ್ ಮಾಡಿ ಎಂಜಾಯ್ ಮಾಡುವ ಎಂದು ಹೇಳಿದ್ದಾಳೆ.
ಬಳಿಕ ಎಚ್ಚೆತ್ತ ಗಣರಾಜ್ ಭಟ್ ತಕ್ಷಣವೇ ಸಂಘಟನೆಯ ಮುಖಂಡರಿಗೆ ವಿಷಯ ಮುಟ್ಟಿಸಿದ್ದಾರೆ. ಆಗ ಈ ರೀತಿ ಹಲವು ಮುಖಂಡರಿಗೆ ಫ್ರೆಂಡ್ ರಿಕ್ವೇಸ್ಟ್ ಬಂದಿದೆ ಎಂಬ ವಿಚಾರವನ್ನು ಮುಖಂಡರು ತಿಳಿಸಿದ್ದಾರೆ.
ಆ ನಂತರ ಮರುದಿನ ಬೆಳಿಗ್ಗೆ ಗಣರಾಜ್ ಭಟ್ ಗೆ ಅದೇ ಖಾತೆಯಿಂದ ವಿಡಿಯೋ ಕಾಲ್ ಬಂದಿದ್ದು, ಅದನ್ನು ಅವರು ತಮ್ಮ ಮುಖ ಕಾಣದಂತೆ ಸ್ವೀಕರಿಸಿದ್ದಾರೆ. ಆಗ ಯುವತಿಯೊಬ್ಬಳು ನಗ್ನವಾಗಿ ಇರುವ ದೃಶ್ಯ ಕಂಡಿದೆ. ಬಳಿಕ ಹತ್ತಾರು ಅಶ್ಲೀಲ ಮೆಸೇಜ್ ಗಳು ಬಂದಿದೆ. ಅಲ್ಲದೆ, ಪದೇ ಪದೇ ಆಕೆ ವಾಟ್ಸಾಪ್ ನಂಬರ್ ಕೇಳಿದ್ದಾಳೆ. ಆಗ ಗಣರಾಜ್ ಭಟ್ ಕೂಡಲೇ ಪುತ್ತೂರು ಠಾಣೆಗೆ ದೂರು ನೀಡಿದ್ದಾರೆ.
ಆ ಬಳಿಕ ಅವರಿಗೆ ಈ ರೀತಿ ಹಲವಾರು ಮಂದಿಗೆ ಫ್ರೆಂಡ್ ರಿಕ್ವೇಸ್ಟ್, ಕರೆಗಳು ಬಂದಿರುವ ವಿಚಾರ ಗೊತ್ತಾಗಿದೆ. ಇದರ ಹಿಂದೆ ದೊಡ್ಡ ಜಾಲ ಅಡಗಿದ್ದು, ಹಿಂದೂ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.