ಕೇಂದ್ರ ವನ ಧನ್ ಯೋಜನೆಯ ಉಪಕ್ರಮದಡಿ ಮಾರುಕಟ್ಟೆಗೆ ಬರಲಿದೆ ಮಾಲವೇದನ್ ಬುಡಕಟ್ಟು ಜನಾಂಗ ತಯಾರಿಸುವ ಜೇನು ನೆಲ್ಲಿಕಾಯಿ

ತಿರುವನಂತಪುರ: ಸ್ಥಳೀಯ ಸಮುದಾಯವನ್ನು ಅದರಲ್ಲೂ ವಿಶೇಷವಾಗಿ ಬುಡಕಟ್ಟು ಜನರನ್ನು ಒಳಗೊಳ್ಳುವ ದೃಷ್ಟಿಯಿಂದ, ಕೇಂದ್ರ ಸರ್ಕಾರವು ವನ್ ಧನ್ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಬುಡಕಟ್ಟು ಜನಾಂಗದವರು ಉದ್ಯಮಿಗಳಾಗುವ ಮೂಲಕ ಆರ್ಥಿಕವಾಗಿ ಸಬಲರಾಗಲು ಸರ್ಕಾರವು ಸಹಾಯ ಮಾಡುತ್ತಿದೆ.

ಈ ಯೋಜನೆಯ ಅಂತರ್ಗತ ಇದೀಗ ಕೇರಳದ ರನ್ನಿ ಪ್ರದೇಶದ ಮಾಲವೇದನ್ ಬುಡಕಟ್ಟು ಜನಾಂಗದವರು ತಯಾರಿಸಿದ ಜನಪ್ರಿಯ ಜೇನು ನೆಲ್ಲಿಕಾಯಿ ಕೇರಳ ರಾಜ್ಯದಾದ್ಯಂತ ಲಭ್ಯವಿರಲಿದೆ. ಚಿತ್ತಾರದ ಓಲಿಕಲ್ಲು ಕುಗ್ರಾಮದಲ್ಲಿ ವಾಸವಾಗಿರುವ ಈ ಬುಡಕಟ್ಟು ಜನಾಂಗದವರು ಹಲವು ವರ್ಷಗಳಿಂದ ತಯಾರಿಸುವ ಈ ಜೇನು ನೆಲ್ಲಿಕಾಯಿಯನ್ನು ಅರಣ್ಯ ಇಲಾಖೆಯು ಮಾರುಕಟ್ಟೆಗೆ ತರಲಿದೆ.

ಕಾಡಿನಲ್ಲಿ ಸಂಗ್ರಹಿಸಿದ ಪರಿಶುದ್ಧ ಕಾಡು ಜೇನುತುಪ್ಪದಿಂದ ತಯಾರಿಸಿದ ಈ ಉತ್ಪನ್ನವು ಸಕ್ಕರೆಯನ್ನು ಬಳಸಿ ತಯಾರಿಸುವ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ನಕಲಿ ಉತ್ಪನ್ನಗಳಿಗಿಂತ ಉತ್ತಮವಾಗಿದೆ. ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಸೇರಿದಂತೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರ ಸೇವನೆಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ; ದೇಹದ ಉಷ್ಣತೆಯನ್ನು ತಗ್ಗಿಸುವುದು; ಕೆಮ್ಮು ಮತ್ತು ಶೀತವನ್ನು ಗುಣಪಡಿಸುವುದು; ಯಕೃತ್ತನ್ನು ಬಲಪಡಿಸುವುದು, ಕಾಮಾಲೆ ಮತ್ತು ಆಸ್ತಮಾವನ್ನು ತಡೆಗಟ್ಟುವುದು ಸೇರಿದಂತೆ ಚರ್ಮ ಮತ್ತು ಕೂದಲನ್ನು ಪೋಷಿಸುತ್ತದೆ.

ಯೋಜನೆ ಕುರಿತು ವಿವರ ಹಂಚಿಕೊಂಡ ಚಿತ್ತಾರ ಉಪ ವಲಯಾಧಿಕಾರಿ ಶಿಜು ಎಸ್.ವಿ.ನಾಯರ್ ಮಾತನಾಡಿ, ಮೂರು ತಿಂಗಳ ಹಿಂದೆ ಇದನ್ನು ಆರಂಭಿಸಲಾಗಿದ್ದು, ಇದರಡಿಯಲ್ಲಿ ಗಿರಿಜನರು ರನ್ನಿ ಅರಣ್ಯದಿಂದ ಜೇನು ಮತ್ತು ನೆಲ್ಲಿಕಾಯಿಯನ್ನು ಸಂಗ್ರಹಿಸಿ ಅದನ್ನು ತಯಾರಿಸಿ ನಂತರ ಮಾರಾಟಕ್ಕಾಗಿ ಓಲಿಕಲ್ಲು ವನ ಸಂರಕ್ಷಣೆ ಸಮಿತಿಗೆ ಈ ಉತ್ಪನ್ನವನ್ನು ನೀಡುತ್ತಾರೆ ಎಂದು ಹೇಳಿದರು.

ತಯಾರಿಸುವ ವಿಧಾನ

ಜೇನು ನೆಲ್ಲಿಕಾಯಿ ತಯಾರಿಸಲು 40 ದಿನಗಳು ತಗಲುತ್ತವೆ. ಮೊದಲು ಕಾಡಿನಿಂದ ನೆಲ್ಲಿಕಾಯಿಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು ಅವುಗಳನ್ನು ಕುದಿಸುವ ಮೂಲಕ ತೇವಾಂಶವನ್ನು ತೆಗೆದುಹಾಕಲಾಗುತ್ತದೆ, ನಂತರ ಅವುಗಳನ್ನು ಕಾಡು ಜೇನುತುಪ್ಪದಲ್ಲಿ ಹಾಕಲಾಗುತ್ತದೆ. 10 ಕಿಲೋಗ್ರಾಂ ಹಣ್ಣಿಗೆ 7.5 ಕೆಜಿ ಜೇನುತುಪ್ಪ ಬೇಕಾಗುತ್ತದೆ. 20 ದಿನಗಳ ನಂತರ ನೆಲ್ಲಿಕಾಯಿಯನ್ನು ಹೊರತೆಗೆಯಲಾಗುತ್ತದೆ ಮತ್ತು ಇನ್ನೊಂದು 20 ದಿನಗಳವರೆಗೆ ತಾಜಾ ಜೇನುತುಪ್ಪವನ್ನು ಹಾಕಲಾಗುತ್ತದೆ. 300 ಗ್ರಾಂನ ಪ್ರತಿ ಜಾರ್ ಅನ್ನು 350 ರೂ.ಗೆ ಮಾರಾಟ ಮಾಡಲಾಗುತ್ತದೆ.

ಈ ಉತ್ಪನ್ನದ ಮಾರಾಟಕ್ಕೆ ಪೂರಕತೆಯನ್ನು ಒದಗಿಸಲು ಇದನ್ನು ‘ವನ ಜ್ಯೋತಿ ವಿಡಿವಿಕೆ’ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಮೌಲ್ಯವರ್ಧಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಮತ್ತು ಮಾರಾಟ ಮಾಡಲು ರನ್ನಿ ವಿಡಿವಿಕೆ ಅನೇಕ ಸ್ವ-ಸಹಾಯ ಗುಂಪುಗಳನ್ನು ಯೋಜನೆಯೊಳಗೆ ಸೇರಿಸಿಕೊಂಡಿದೆ. ಈ ಉಪಕ್ರಮವು ಗಿರಿಜನರಿಗೆ ತಮ್ಮ ಉತ್ಪನ್ನಕ್ಕೆ ಉತ್ತಮ ಬೆಲೆಯನ್ನು ಪಡೆಯಲು ಮತ್ತು ಮಧ್ಯವರ್ತಿಗಳ ಶೋಷಣೆಯನ್ನು ತಡೆಯಲು ಅನುವು ಮಾಡಿಕೊಡುತ್ತದೆ. ಜೇನು ನೆಲ್ಲಿಕಾಯಿ ಉತ್ಪಾದನೆಯನ್ನು ಹೆಚ್ಚಿಸಲು, ನೆಲ್ಲಿಕಾಯಿಗಳನ್ನು ಇತರ ಸ್ಥಳಗಳಿಂದಲೂ ಸಂಗ್ರಹಿಸಲಾಗುತ್ತದೆ.

ಕೊಟ್ಟಾಯಂ ಮತ್ತು ಕ್ವಿಲೋನ್ ಜಿಲ್ಲೆಗಳ ನಿವಾಸಿಗಳಾದ ಮಾಲಾ ವೇದನ್‌ಗಳು ಕೇರಳದ ಕಾಡುಮೀಂಚಿರ, ನರನಾಮೂಜಿ, ಕುಮಾರಪುರಂ, ಕಟ್ಟಚಿರಾ, ಒಟ್ಟಕ್ಕಲ್, ಒರುಕುನ್ನು, ತೆಂಕಾಶಿ, ತೆನ್ಮಲ ಮತ್ತು ಅಚನ್‌ಕೋವಿಲ್ ಪ್ರದೇಶಗಳಲ್ಲಿ ಕಂಡುಬರುತ್ತಾರೆ. ಇವರು ತಮಿಳು ಮತ್ತು ಮಲಯಾಳಂನ ಉಪಭಾಷೆಯನ್ನು ಮಾತನಾಡುತ್ತಾರೆ. ಪ್ರಾಚೀನ ಯುಗದಲ್ಲಿ, ಇವರು ಬೇಟೆಯಾಡಿ ಜೀವನ ಸಾಗಿಸುತ್ತಿದ್ದರು. ಬೇಟೆಯ ಒಂದು ಭಾಗವನ್ನು ತಾವು ಬಳಸಿ ಉಳಿದ ಭಾಗವನ್ನು ಇತರ ಅಗತ್ಯಗಳಿಗಾಗಿ ಮಾರಾಟ ಅಥವಾ ವಿನಿಮಯ ಮಾಡಿಕೊಳ್ಳುತ್ತಿದ್ದರು. ವರ್ಷದ ಕೆಲವು ಋತುಗಳಲ್ಲಿ, ಈ ಜನರು ಮೀನುಗಾರಿಕೆಯಲ್ಲಿಯೂ ತೊಡಗಿಕೊಳ್ಳುತ್ತಾರೆ.