ಉಡುಪಿ: ಹೈರಿಸ್ಕ್ ದೇಶದಿಂದ ಬಂದಿರುವ ಮೂವರಿಗೆ ಹೋಮ್ ಕ್ವಾರಂಟೈನ್‌: ಡಿಸಿ ಕೂರ್ಮಾರಾವ್

ಉಡುಪಿ: ಉಡುಪಿ ಜಿಲ್ಲೆಗೆ ಕಳೆದ ಐದು ದಿನಗಳಲ್ಲಿ 91 ಮಂದಿ ವಿದೇಶದಿಂದ ಆಗಮಿಸಿದ್ದು, ಈ ಪೈಕಿ ಮೂರು ಮಂದಿ ಹೈರಿಸ್ಕ್ ದೇಶದಿಂದ ಬಂದಿದ್ದಾರೆ. ಇವರೆಲ್ಲರ ವರದಿ ನೆಗೆಟಿವ್ ಬಂದಿದೆ. ಆದರೂ ಹೈರಿಸ್ಕ್ ದೇಶದಿಂದ ಬಂದಿರುವ ಮೂವರನ್ನು ಹೋಮ್ ಕ್ವಾರಂಟೈನ್‌ ನಲ್ಲಿ ಇರಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ಹಾಲ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಒಂದು ವಾರದಲ್ಲಿ ಜಿಲ್ಲೆಗೆ ಕೇರಳದಿಂದ 69 ಮಂದಿ ಬಂದಿದ್ದು, ಅದರಲ್ಲಿ 9 ಪಾಸಿಟಿವ್ ಪ್ರಕರಣ ಹಾಗೂ ಮಹಾರಾಷ್ಟ್ರದಿಂದ 266 ಮಂದಿ ಅಗಮಿಸಿದ್ದು, ಅದರಲ್ಲಿ 12 ಪಾಸಿಟಿವ್ ಕಂಡು ಬಂದಿದೆ ಎಂದು ಹೇಳಿದರು.

ಕೇರಳದಿಂದ ಬರುವವರಿಗೆ ಪ್ರಯಾಣ ಆರಂಭಿಸಿದ 72 ಗಂಟೆಯೊಳಗಿನ ಕೋವಿಡ್-19 ನೆಗೆಟಿವ್ ವರದಿ ಇದ್ದರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ ಮತ್ತು 1 ವಾರದ ಕಾಲ ನಿಗಾವಣೆಗೆ ಒಳಪಡಿಸಲಾಗುತ್ತಿದೆ. ಒಂದು ವಾರದ ನಂತರ ಅವರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು. ಮಹಾರಾಷ್ಟ್ರ ದಿಂದ ಬರುವವರು 72 ಗಂಟೆಯೊಳಗಿನ ಕೋವಿಡ್-19 ನೆಗೆಟಿವ್ ವರದಿ ಹೊಂದಿರಬೇಕು. ಜಿಲ್ಲೆಯಲ್ಲಿ ಹೊಸದಾಗಿ ಪತ್ತೆಯಾದ ಎಲ್ಲಾ ಕೋವಿಡ್ ಸೋಂಕಿತರನ್ನು ಹೋಮ್ ಕ್ವಾರೆಂಟೈನ್‌ಗೆ ಒಳಪಡಿಸಲಾಗುವುದು ಎಂದರು.