ನ್ಯಾಯ ಕೇಳೋಕೆ ಹೋದವರಿಗೆ ಆವಾಜ್ ಹಾಕಿದ ಗೃಹ ಸಚಿವ: ನ್ಯಾಯ ಕೇಳೋದೇ ತಪ್ಪಾಗೋಯ್ತಾ ಎಂದು ಅಳಲು ತೋಡಿಕೊಂಡ ಹರ್ಷ ಅಕ್ಕ

ಬೆಂಗಳೂರು: ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷನ ಬರ್ಬರ ಕೊಲೆ ಪ್ರಕರಣದ ಆರೋಪಿಗಳು ಜೈಲಿನಲ್ಲಿ ವಿ.ಐ.ಪಿ ಸವಲತ್ತುಗಳನ್ನು ಪಡೆಯುತ್ತಿರುವ ಬಗ್ಗೆ ಮಾಧ್ಯಮ ವರದಿಗಳನ್ನು ಕಂಡು ಬೇಸರಗೊಂಡ ಹರ್ಷ ಅಕ್ಕ ಅಶ್ವಿನಿ ಘಟನೆಯ ಸತ್ಯಾಸತ್ಯತೆಯ ಬಗ್ಗೆ ಗೃಹ ಸಚಿವರ ಬಳಿ ಕೇಳಿ ತಿಳಿದುಕೊಳ್ಳಲು ಸಚಿವರ ಕಚೇರಿಗೆ ಭೇಟಿ ನೀಡಿದ್ದಾರೆ.

ಅಶ್ವಿನಿ ಬೆಂಗಳೂರಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತನ್ನ ಸಹೋದರ ಹರ್ಷನ ಹಂತಕರಿಗೆ ನೀಡುತ್ತಿರುವ ‘ಉನ್ನತ ದರ್ಜೆಯ ಸೌಲಭ್ಯ’ಗಳ ಕುರಿತು ಪ್ರಶ್ನಿಸಿದ್ದಾರೆ. ಇದಕ್ಕೆ ಗರಂ ಆದ ಸಚಿವರು ಸಿಟ್ಟಿಗೆದ್ದು, “ನಾವು ನಿಮ್ಮ ಕುಟುಂಬದವರೊಂದಿಗಿದ್ದೇವೆ. ನಾವು ನಿಮಗೆ ಮೋಸ ಮಾಡುತ್ತೇವೆ ಎಂಬಂತೆ ನೀವು ಮಾತನಾಡುತ್ತಿದ್ದೀರಿ” ಎಂದು ಆವಾಜ್ ಹಾಕಿದ್ದಾರೆ. ಈ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಶ್ವಿನಿ ಏನು ನಡೀತಾ ಇದೆ ಅಂತಾ ಕೇಳೋದೇ ತಪ್ಪಾ, ಪ್ರಶ್ನೆ ಕೇಳೋಕೆ ಬಂದವರನ್ನು ಬಾಯಿ ಮುಚ್ಚಿಸಿ ಕಳುಹಿಸುತ್ತಾರೆ. ನ್ಯಾಯ ಕೇಳುವುದೆ ತಪ್ಪಾಗಿ ಹೋಯಿತಾ. ಮಾಹಿತಿ ಕೇಳಲಿಕ್ಕೆ ಬಂದವರಿಗೆ ಸ್ಪಂದಿಸುವುದು ಬಿಟ್ಟು ಜೋರು ಜೋರಾಗಿ ಮಾತನಾಡಿದರೆ ಯಾರ ಬಳಿ ಹೋಗಿ ನ್ಯಾಯ ಕೇಳುವುದು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅರಗ ಜ್ಞಾನೇಂದ್ರ ದೂರುಬಂದ ನಂತರ, ಸರ್ಕಾರ ಈಗಾಗಲೇ ಜೈಲು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದೆ ಮತ್ತು ತನಿಖೆ ಪ್ರಗತಿಯಲ್ಲಿದೆ. ”ಜೈಲು ಸಿಬ್ಬಂದಿ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ನಾನು ಆಕೆಗೆ ವಿವರಿಸಿದೆ. ಆದರೂ ಆಕೆ ಆರೋಪ ಮಾಡುತ್ತಿರುವುದು ದುರದೃಷ್ಟಕರ. ಇದು ಸತ್ಯದಿಂದ ದೂರವಿರುವ ಆಪಾದನೆ” ಎಂದಿದ್ದಾರೆ.