ಗೃಹ ಸಚಿವ ಅಮಿತ್ ಶಾ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದಲ್ಲಿ ಭಾಗಿ: ಸಂಚಾರ ಮಾರ್ಗದಲ್ಲಿ ಬದಲಾವಣೆ

ಪುತ್ತೂರು: ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಫೆ.11ರಂದು ಪುತ್ತೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕಾರ್ಯಕ್ರಮಗಳ ವಿವರಗಳನ್ನು ನೀಡಲಾಗಿದ್ದು, ಮೊದಲು ಮುಖ್ಯಮಂತ್ರಿ ಬೊಮ್ಮಾಯಿ ವಿವೇಕಾನಂದ ಇಂಜಿನಿಯರ್‌ ಕಾಲೇಜಿಗೆ ಆಗಮಿಸಿ ಕೃಷಿ ಮೇಳದಲ್ಲಿ ಪಾಲ್ಗೊಂಡು ನಂತರ 3.25 ಗಂಟೆಗೆ ತೆಂಕಿಲ ಸಮಾವೇಶಕ್ಕೆ ತೆರಳಿದ್ದಾರೆ. ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೃಹ ಸಚಿವ ಅಮಿತ್ ಷಾ 2.20 ಕ್ಕೆ ಬಿಎಸ್ಎಫ್ ಹೆಲಿಕಾಪ್ಟರ್ ಮೂಲಕ ಈಶ್ವರಮಂಗಲ ಗಜಾನನ ಶಾಲೆ ಹೆಲಿಪ್ಯಾಡ್ ಗೆ 2.45 ತಲುಪಿ, ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಪೂಜೆಯ ಬಳಿಕ ಅಮರಗಿರಿಯ ಲೋಕಾರ್ಪಣೆ ನಡೆಸಲಿದ್ದಾರೆ

ಬಳಿಕ ಹೆಲಿಕಾಪ್ಟರ್ ಮೂಲಕ ಪುತ್ತೂರಿನ ಎನ್ ಆರ್ ಸಿ ಸಿ ಮೈದಾನಕ್ಕೆ 3.15 ಕ್ಕೆ ತಲುಪಿ ರಸ್ತೆಯ ಮೂಲಕ ತೆಂಕಿಲ ಮೈದಾನಕ್ಕೆ 3.25ಕ್ಕೆ ಬರಲಿದ್ದಾರೆ. 3.30 ಕ್ಕೆ ಕ್ಯಾಂಪ್ಕೋ ಗೋಲ್ಡನ್ ಜುಬಿಲಿ ಆಚರಣೆಗಳ ಉದ್ಘಾಟನೆ ನಡೆಯಲಿದೆ.

ವೇದಿಕೆಯಲ್ಲಿ ಭಾರತ್ ಮಾತೆ ಮತ್ತು ಕ್ಯಾಂಪ್ಕೋ ಸಂಸ್ಥಾಪಕ ಅಧ್ಯಕ್ಷ ವಿ ಸುಬ್ರಾಯ ಭಟ್ ಭಾವಚಿತ್ರಕ್ಕೆ ಪುಷ್ಪಾರ್ಚನೆ. ಬಳಿಕ ಡಿಜಿಟಲ್ ಲಾಂಚ್ -ಪುತ್ತೂರಿನ ಕ್ಯಾಂಪ್ಕೋ ಅಗ್ರಿ ಮಾಲ್‌ಗೆ ಶಂಕುಸ್ಥಾಪನೆ ಮತ್ತು ತೆಂಗಿನಕಾಯಿ ಯೋಜನೆ-ಕೊಬ್ಬರಿ ಎಣ್ಣೆ-ಕಲ್ಪ ಪ್ರಾರಂಭ, ಕ್ಯಾಂಪ್ಕೊ ಉಗ್ರಾಣ ಉದ್ಘಾಟನೆ ನಡೆಯಲಿದ್ದು, ಗಣ್ಯರು ಭಾಗವಹಿಸಲಿದ್ದಾರೆ.

ಪುತ್ತೂರಿನ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ

ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಪುತ್ತೂರಿನಲ್ಲಿ ಫೆ.11ರಂದು ಬದಲಿ ಮಾರ್ಗಗಳನ್ನು ನೀಡಲಾಗಿದೆ. ಬೊಳುವಾರು ಬೈಪಾಸ್ ನ ಲಿನೆಟ್ ಜಕ್ಷನ್ ನಿಂದ ಮುಕ್ರಂಪಾಡಿಯವರೆಗೆ ಮಧ್ಯಾಹ್ನ 2 ರಿಂದ ಸಂಜೆ 5.30ರವರೆಗೆ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಮಂಗಳೂರು ಕಡೆಯಿಂದ ಸುಳ್ಯ ಮತ್ತು ಮಡಿಕೇರಿ ಕಡೆಗೆ ಸಾಗುವ ವಾಹನಗಳು ಲಿನೆಟ್ ಜಕ್ಷನ್ ನಿಂದ – ಬೊಳುವಾರು ಜಂಕ್ಷನ್ – ದರ್ಬೆ – ಪುರುಷರಕಟ್ಟೆ – ಪಂಜಳ- ಪರ್ಪುಂಜ ಮಾರ್ಗವನ್ನು ಬಳಸುವಂತೆ ಪುತ್ತೂರು ಉಪ ವಿಭಾಗ ಸಹಾಯಕ ಆಯುಕ್ತ ಆದೇಶ ಹೊರಡಿಸಿದ್ದಾರೆ.