ಕ್ಯಾಂಪ್ಕೋ ಸಂಸ್ಥೆಯ 50ನೇ ವರ್ಷಾಚರಣೆ ಹಿನ್ನೆಲೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿ

ಪುತ್ತೂರು: ಕ್ಯಾಂಪ್ಕೋ ಸಂಸ್ಥೆಯ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವರು ಪುತ್ತೂರಿಗೆ ಆಗಮಿಸುತ್ತಿದ್ದು, ಕ್ಯಾಂಪ್ಕೋ ನೇತೃತ್ವದಲ್ಲಿ ಬೃಹತ್ ಸಹಕಾರಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಫೆ.11 ರಂದು ಸಂಜೆ 3 ಗಂಟೆಗೆ ಸಮಾವೇಶ ನಡೆಯಲಿದೆ. ಅದೇ ದಿನ ಗೃಹ ಸಚಿವರು ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಗೂ ಭೇಟಿ ನೀಡಲಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.

ಮಂಗಳವಾರ ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಪುತ್ತೂರಿನ ತೆಂಕಿಲದಲ್ಲಿರುವ ವಿವೇಕಾನಂದ ವಿದ್ಯಾಸಂಸ್ಥೆಯ ಮೈದಾನದಲ್ಲಿ ಸಮಾವೇಶ ನಡೆಸಲಾಗುವುದು. ಇದರಲ್ಲಿ ಪುತ್ತೂರು, ಸುಳ್ಯ, ಕಡಬ, ಬಂಟ್ವಾಳ, ಬೆಳ್ತಂಗಡಿ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳ ಜನರು ಬಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಫೆ.11ರಂದು ಪುತ್ತೂರಿಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಹಾಗೂ ಸಹಕಾರ ಸಚಿವ ಅಮಿತ್ ಶಾ ಬೃಹತ್ ಸಹಕಾರ ಸಮಾವೇಶದಲ್ಲಿ ಪಾಲ್ಗೋಳಲಿದ್ದಾರೆ. ಈ ವಿಚಾರವನ್ನು ಖಚಿತಪಡಿಸಿರುವ ಶಾಸಕ ಸಂಜೀವ ಮಠಂದೂರು ಅವರು ಈ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಜಿಲ್ಲಾ ಬಿಜೆಪಿಯು ಈ ಸಮಾವೇಶವನ್ನು ಯಶಸ್ವಿಗೊಳಿಸಲು ನಿರ್ಧರಿಸಿದ್ದು, ಸುಮಾರು 1 ಲಕ್ಷ ಜನರು ಸಮಾವೇಶದಲ್ಲಿ ಭಾಗವಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದರಲ್ಲಿ ಸಹಕಾರಿಗಳು ಸೇರಿದಂತೆ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.