ಎಲ್ಲರ ಬಾಳು ಬಂಗಾರವಾಗಿಸಲಿದೆ ಹೊಂಬಾಳೆ: ಮುಂದಿನ 5 ವರ್ಷಗಳಲ್ಲಿ 3,000 ಕೋಟಿ ರೂ ಹೂಡಿಕೆ ಮಾಡಲಿದೆ ಚಿತ್ರ ನಿರ್ಮಾಣ ಸಂಸ್ಥೆ!

2022 ರಲ್ಲಿ ಬೆನ್ನು ಬೆನ್ನಿಗೆ ಎರಡು ಯಶಸ್ವಿ ಚಿತ್ರಗಳಾದ ಕೆ.ಜಿ.ಎಫ್-೨ ಮತ್ತು ಕಾಂತಾರ ಚಿತ್ರಗಳನ್ನು ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು ಮುಂದಿನ ಐದು ವರ್ಷಕ್ಕೆ ಬರೋಬ್ಬರಿ 3,000 ಕೋಟಿ ರೂ ಹೂಡಿಕೆ ಮಾಡಲಿದ್ದಾರೆ. ಅಲ್ಲದೆ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯು ಮುಂದಿನ ಎರಡು ವರ್ಷಗಳಲ್ಲಿ 10-12 ಚಿತ್ರಗಳನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದೆ.

ದಕ್ಷಿಣ ಭಾರತದ ಘಟಾನುಘಟಿ ನಟರನ್ನು ಹೊಂಬಾಳೆ ಫಿಲ್ಮ್ಸ್ ತೆರೆಗೆ ತರಲಿದ್ದು ಹೊಂಬಾಳೆಯಿಂದ ಎಲ್ಲರ ಬಾಳು ಬಂಗಾರವಾಗಲಿದೆ.

Image

ಪ್ರಭಾಸ್ ನಟನೆಯ ಸಲಾರ್, ಪೃಥ್ವಿರಾಜ್ ನ ಟೈಸನ್, ರಕ್ಷಿತ್ ಶೆಟ್ಟಿಯ ರಿಚರ್ಡ್ ಆಂಟನಿ, ಫಹಾದ್ ಫಾಸಿಲ್ ನ ಧೂಮಂ, ಶ್ರೀ ಮುರಳಿಯ ಬಘೀರಾ ಹಾಗೂ ಕೀರ್ತಿ ಸುರೇಶ್ ನಟನೆಯ ರಘುತಾತಾ ಮುಂತಾದ ಚಿತ್ರಗಳ ಪಟ್ಟಿಯೇ ಇದೆ.

ಪ್ರತಿ ವರ್ಷ ಒಂದು ದೊಡ್ಡ ಸಿನಿಮಾವನ್ನಾದರೂ ಮಾಡಬೇಕು ಎಂದು ಬಯಸುತ್ತೇವೆ. 2022 ರಲ್ಲಿ, ನಾವು ಕೆಜಿಎಫ್ 2 ಮತ್ತು ಕಾಂತಾರ ಮಾಡಿದ್ದೇವೆ. 2023 ರಲ್ಲಿ, ನಾವು ಸಲಾರ್ ತರಲಿದ್ದೇವೆ ಮತ್ತು ಅದು ದೊಡ್ಡ ಹಿಟ್ ಆಗುವ ನಿರೀಕ್ಷೆಯಿದೆ ಎಂದು ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.

ಭಾರತದಲ್ಲಿ ಶೇಕಡಾ 70-75 ರಷ್ಟು ಸ್ಕ್ರೀನ್‌ಗಳನ್ನು ಗುರಿಯಾಗಿಟ್ಟುಕೊಂಡು ಸಲಾರ್ ಅನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

2019 ಕ್ಕೆ ಹೋಲಿಸಿದರೆ ಸಂಸ್ಥೆಯು ಈ ವರ್ಷ ಸುಮಾರು 25 ಪಟ್ಟು ಹೆಚ್ಚು ವ್ಯವಹಾರವನ್ನು ದಾಖಲಿಸಿದೆ ಮತ್ತು ಮುಂಬರುವ ಯೋಜನೆಗಳಿಂದ ಈ ವೇಗವನ್ನು ಮುಂದುವರಿಸುವ ನಿರೀಕ್ಷೆಯಿದೆ ಎಂದು ಹೊಂಬಾಳೆ ಫಿಲಂಸ್‌ನ ಪಾಲುದಾರ ಚಲುವೇಗೌಡ ಹೇಳಿದ್ದಾರೆ.