ಹ್ಯಾಂಗ್‌ಝೌ (ಚೀನಾ): ಏಷ್ಯಾಡ್ನಲ್ಲಿ ಭಾರತದ ಅಥ್ಲೀಟ್‌ಗಳು ಪದಕ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದಾರೆ.19ನೇ ಏಷ್ಯನ್ ಗೇಮ್ಸ್ನಲ್ಲಿ ಈವರೆಗೆ ಭಾರತ 60 ಪದಕಗಳನ್ನು ಬಾಚಿಕೊಂಡಿದೆ. 9ನೇ ದಿನವಾದ ಇಂದು ರೋರಲ್ ಸ್ಕೇಟಿಂಗ್, ಟೇಬಲ್ ಟೆನಿಸ್, ಸ್ಟೀಪಲ್ಚೇಸ್ನಲ್ಲಿ ಪದಕಗಳು ಬಂದಿವೆ. ಸಂಜೆ ನಡೆದ ಸ್ಪರ್ಧೆಯಲ್ಲಿ ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಆನ್ಸಿ ಸೋಜನ್ ಎಡಪ್ಪಿಳ್ಳಿ ಮತ್ತು 4×400 ಮೀ ಮಿಶ್ರ ತಂಡ ಬೆಳ್ಳಿ ಗೆದ್ದುಕೊಂಡಿತು.ಇನ್ನು ಹತ್ತು ಪದಕ ಗೆದ್ದರೆ ಕಳೆದ ಬಾರಿಯ ದಾಖಲೆ ಮುರಿಯಲಿದೆ. 2018ರಲ್ಲಿ ಒಟ್ಟಾರೆ 70 ಪದಕಗಳನ್ನು ಭಾರತೀಯ ಅಥ್ಲೀಟ್‌ಗಳು ಗೆದ್ದಿದ್ದರು.
ಮಹಮ್ಮದ್ ಅಜ್ಮಲ್ ವರಿಯತ್ತೋಡಿ, ವಿತ್ಯಾ ರಾಮರಾಜ್, ರಾಜೇಶ್ ರಮೇಶ್ ಮತ್ತು ಶುಭಾ ವೆಂಕಟೇಶನ್ 4×400 ಮೀಟರ್ ದೂರವನ್ನು ಮಿಶ್ರ ತಂಡ ರಿಲೇಯಲ್ಲಿ 3:14.34 ಸೆ. ಸಮಯದಲ್ಲಿ ಕ್ರಮಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಎರಡನೇ ಸ್ಥಾನದಲ್ಲಿರುವ ಶ್ರೀಲಂಕಾ ತಂಡವನ್ನು ಅನರ್ಹಗೊಳಿಸಲಾಯಿತು. ಹೀಗಾಗಿ ಬೆಳ್ಳಿ ಪದಕ ಭಾರತದ ಪಾಲಾಯಿತು.ಆನ್ಸಿ ಸೋಜನ್ ಎಡಪ್ಪಿಳ್ಳಿ ತಮ್ಮ ಚೊಚ್ಚಲ ಏಷ್ಯನ್ ಗೇಮ್ಸ್ ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದರು. ಐದನೇ ಪ್ರಯತ್ನದಲ್ಲಿ 6.63 ಮೀ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರು. ಶೈಲಿ ಸಿಂಗ್ 6.48 ಮೀ ಜಿಗಿತದೊಂದಿಗೆ ಐದನೇ ಸ್ಥಾನ ಪಡೆದರು.
ಹಾಕಿ-ಸೆಮಿಫೈನಲ್ ಪ್ರವೇಶಿಸಿದ ಭಾರತ: ಭಾರತದ ಹಾಕಿ ತಂಡ ಬಾಂಗ್ಲಾದೇಶವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ. ಐದು ಪೂಲ್ ಎ ಪಂದ್ಯಗಳನ್ನು ಗೆದ್ದು ತಂಡ ಅಜೇಯವಾಗಿ ಮುಂದುವರೆದಿದೆ. ಇಂದು ನಡೆದ ಅಂತಿಮ ಪೂಲ್ ಎ ಮುಖಾಮುಖಿಯಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಬಾಂಗ್ಲಾದೇಶದ ವಿರುದ್ಧ 12-0 ಅಂತರದಲ್ಲಿ ಜಯಗಳಿಸಿತು. ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಟೀಂ ಪೂಲ್ ಹಂತದಲ್ಲಿ 58 ಗೋಲ್ ಗಳಿಸಿದ್ದು, ಕೇವಲ ಐದು ಗೋಲುಗಳನ್ನಷ್ಟೇ ಎದುರಾಳಿಗೆ ಬಿಟ್ಟುಕೊಟ್ಟಿತು.
ಈ ಗೆಲುವು ಪೂಲ್ ಎ ಯಿಂದ ಭಾರತಕ್ಕೆ ಸೆಮಿಫೈನಲ್ ಅರ್ಹತೆಯನ್ನು ಖಾತ್ರಿಪಡಿಸಿತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಪೂಲ್ ಎನಲ್ಲಿ ಜಪಾನ್ ವಿರುದ್ಧ ಸೋತು ಎರಡನೇ ಸ್ಥಾನ ಪಡೆದು ಪಂದ್ಯಾವಳಿಯಿಂದ ಹೊರಬಿದ್ದಿತು. ಭಾರತ ಬುಧವಾರ ಅಕ್ಟೋಬರ್ 4ರಂದು ಮಧ್ಯಾಹ್ನ 1:30ಕ್ಕೆ (ಭಾರತೀಯ ಕಾಲಮಾನ) ಪೂಲ್ ಬಿ ರನ್ನರ್ ಅಪ್ ತಂಡವನ್ನು ಎದುರಿಸಲಿದೆ.ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್‌ಗಳ ಮೂಲಕ ಹ್ಯಾಟ್ರಿಕ್ ಗೋಲು ಗಳಿಸಿದರೆ, ಮನ್‌ದೀಪ್ ಸಿಂಗ್ ಕೂಡ ಮೂರು ಬಾರಿ ಗೋಲು ಹೊಡೆದರು. ಅಭಿಷೇಕ್ ಎರಡು ಗೋಲು ಗಳಿಸಿದರೆ, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ನೀಲಕಂಠ ಶರ್ಮಾ ಮತ್ತು ಅಮಿತ್ ರೋಹಿದಾಸ್ ಕೂಡ ತಲಾ ಒಂದೊಂದು ಗೋಲ್ ಗಳಿಸಿದರು.