ನವದೆಹಲಿ: ಕರ್ನಾಟಕದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಕಳೆದ 2 ತಿಂಗಳಲ್ಲಿ ನಾನು ರಾಜ್ಯಕ್ಕೆ 5 ಬಾರಿ ಭೇಟಿ ನೀಡಿದ್ದೇನೆ. ನಾನು ರಾಜ್ಯದ ಜನರ ನಾಡಿಮಿಡಿತವನ್ನು ಗ್ರಹಿಸಿದ್ದೇನೆ ಮತ್ತು ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ನೋಡಿದ್ದೇನೆ. ಕರ್ನಾಟಕದಲ್ಲಿ ಬಿಜೆಪಿಗೆ ಭಾರಿ ಜನಾದೇಶ ಸಿಗಲಿದೆ.ಮಂಡ್ಯದ ಜನತೆ ಕೂಡ ಈಗ ವಂಶ ಪಾರಂಪರ್ಯ ಪಕ್ಷಗಳನ್ನು ಬಿಟ್ಟು ಬಿಜೆಪಿಯ ಅಭಿವೃದ್ಧಿ ರಾಜಕಾರಣವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದು ಕರ್ನಾಟಕಕ್ಕೆ ಶುಭ ಸೂಚನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮುಂಬರುವ ರಾಜ್ಯಗಳ ಚುನಾವಣೆಯಲ್ಲಿ ರಾಜಸ್ಥಾನ, ಕರ್ನಾಟಕ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದ ಎಲ್ಲಾ ನಾಲ್ಕು ರಾಜ್ಯಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿ ಸಂಸ್ಥೆ ಎಎನ್ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಮೊಘಲರ ಇತಿಹಾಸವನ್ನು ಅಳಿಸಿಹಾಕುವ ಮತ್ತು ಅವರೊಂದಿಗೆ ಸಂಬಂಧಿಸಿದ ನಗರಗಳ ಹೆಸರನ್ನು ಬದಲಾಯಿಸುವ ಆರೋಪಗಳನ್ನು ಅಮಿತ್ ಶಾ ನಿರಾಕರಿಸಿದ್ದಾರೆ. ಬಿಜೆಪಿ ರಾಜ್ಯ ಸರ್ಕಾರಗಳು ತಮ್ಮ ಶಾಸನಬದ್ಧ ಹಕ್ಕುಗಳಲ್ಲಿರುವ “ಉತ್ತಮ ಚಿಂತನೆಯ ನಿರ್ಧಾರಗಳನ್ನು” ತೆಗೆದುಕೊಂಡಿವೆ ಎಂದು ಅವರು ಹೇಳಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಪೈಪೋಟಿ ಇಲ್ಲ ಮತ್ತು ಪ್ರಧಾನಿ ಮೋದಿಗೆ ಜನರ ಸಂಪೂರ್ಣ ಬೆಂಬಲವಿದೆ. 2024 ರ ಚುನಾವಣೆಯಲ್ಲಿ ಬಿಜೆಪಿಗೆ ಪ್ರಮುಖ ವಿರೋಧ ಪಕ್ಷವನ್ನು ದೇಶದ ಜನರು ನಿರ್ಧರಿಸುತ್ತಾರೆ ಮತ್ತು ಅವರು ಯಾವುದೇ ಪಕ್ಷಕ್ಕೆ ಈ ಹಣೆಪಟ್ಟಿ ನೀಡಿಲ್ಲ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರತಿಪಕ್ಷಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಪ್ರತಿಕ್ರಿಯಿಸಿ, ಅವರು ಏಕೆ ನ್ಯಾಯಾಲಯಕ್ಕೆ ಹೋಗಬಾರದು? ಪೆಗಾಸಸ್ ವಿವಾದವನ್ನು ಮಾಡಿದಾಗ ನಾನು ನ್ಯಾಯಾಲಯಕ್ಕೆ ಪುರಾವೆಯೊಂದಿಗೆ ಹೋಗಿರಿ ಎಂದು ಹೇಳಿದ್ದೆ ಆದರೆ ಅವರು ಮಾಡಲಿಲ್ಲ. ಅವರಿಗೆ ಗದ್ದಲ ಸೃಷ್ಟಿಸುವುದು ಹೇಗೆ ಎಂದು ಮಾತ್ರ ತಿಳಿದಿದೆ. ಕೋರ್ಟ್ ತೋ ಹುಮಾರೆ ಕಬ್ಜೆ ಮೇ ನಹಿಂ ಹೈ? (ನ್ಯಾಯಾಲಯವು ನಮ್ಮ ನಿಯಂತ್ರಣದಲ್ಲಿ ಇಲ್ಲವಲ್ಲ)ಎಂದಿದ್ದಾರೆ.
ಭಾರತವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು (ಪಿಎಫ್ಐ) ಯಶಸ್ವಿಯಾಗಿ ನಿಷೇಧಿಸಿದೆ. ಇದು ದೇಶದಲ್ಲಿ ಧಾರ್ಮಿಕ ಮತಾಂಧತೆಯನ್ನು ಉತ್ತೇಜಿಸುವ ಸಂಘಟನೆಯಾಗಿದೆ ಎಂದು ನಾನು ನಂಬುತ್ತೇನೆ. ಅವರ ಚಟುವಟಿಕೆಗಳು ದೇಶದ ಏಕತೆ ಮತ್ತು ಸಮಗ್ರತೆಗೆ ವಿರುದ್ಧವಾಗಿವೆ ಎಂದು ಕಂಡುಬಂದಿರುವ ಪುರಾವೆಗಳು ಸೂಚಿಸುತ್ತವೆ. ನಾವು ವೋಟ್ ಬ್ಯಾಂಕ್ ರಾಜಕೀಯವನ್ನು ಮೀರಿ ಬೆಳೆದಿದ್ದೇವೆ ಮತ್ತು ಪಿಎಫ್ಐ ಅನ್ನು ನಿಷೇಧಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಅದಾನಿ ಮತ್ತು ಕೇಂದ್ರ ಸರಕಾರದ “ನಂಟಿನ” ಕಾಂಗ್ರೆಸ್ ಆರೋಪಗಳನ್ನು ಅಲ್ಲಗಳೆದಿರುವ ಅಮಿತ್ ಶಾ, ಇಲ್ಲಿ ಮರೆಮಾಡಲು ಅಥವಾ ಭಯಪಡಲು ಏನೂ ಇಲ್ಲ ಎಂದಿದ್ದಾರೆ.