ಉಡುಪಿ: ತಾಲೂಕಿನ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿರುವ ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪೆರ್ಣಂಕಿಲದ ಶ್ರೀ ಮಹಾಲಿಂಗೇಶ್ವರ – ಶ್ರೀ ಮಹಾಗಣಪತಿ ದೇವಸ್ಥಾನ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣವಾಗಿ ಜೀರ್ಣೋದ್ಧಾರಗೊಳ್ಳಲಿದ್ದು, ಫೆ. 23ರಂದು ದೇವರ ಬಿಂಬದ ಸಂಕೋಚನದಿಂದ ಜೀರ್ಣೋದ್ಧಾರ ಕಾಮಗಾರಿ ಶುರುವಾಗಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹರಿದಾಸ ಭಟ್ ಮುಂಬೈ ಹೇಳಿದರು.
ಪೆರ್ಣಂಕಿಲದ ಶ್ರೀ ಮಹಾಲಿಂಗೇಶ್ವರ- ಮಹಾಗಣಪತಿ ದೇವಸ್ಥಾನದಲ್ಲಿ ಆವರಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ದೇಗುಲವು ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಅಳುಪ ವಂಶದ ರಾಣಿ ಬಲ್ಲ ಮಹಾದೇವಿ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡಿದೆ ಎಂಬ ಇತಿಹಾಸವಿದೆ. ಜ.12ರಂದು ಜೀರ್ಣೋದ್ಧಾರದ ಪ್ರಾಥಮಿಕ ವಿಧಿಯಾಗಿ ಕೊಪ್ಪರಿಗೆ ಅಪ್ಪ ಸೇವೆ, 100 ನಾರಿಕೇಳ ಗಣಹೋಮ, ಶತ ರುದ್ರಾಭಿಷೇಕ, ಮೃತ್ಯುಂಜಯ ಹೋಮ, ಐಕ್ಯಮತ ಹೋಮಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಶ ನಾಯಕ್ ಪೆರ್ಣಂಕಿಲ ಮಾತನಾಡಿ, ಊರಿನ ಪ್ರತಿಯೊಂದು ಮನೆಯೂ ಈ ಜೀರ್ಣೋದ್ಧಾರದಲ್ಲಿ ಕೈಜೋಡಿಸಬೇಕು ಎಂಬ ಪರಿಕಲ್ಪನೆಯಡಿಯಲ್ಲಿ ಶಿಲಾನ್ಯಾಸಕ್ಕೆ ಒಂದು ಸಾವಿರ ಕಲ್ಲುಗಳನ್ನು ಸಿದ್ದಪಡಿಸಲಾಗಿದೆ. ಶಿಲಾನ್ಯಾಸದಂದು ಪ್ರತಿಯೊಂದು ಮನೆಯವರು ಬಂದು ಉಚಿತವಾಗಿ ಈ ಕಲ್ಲುಗಳಿಂದ ತಾವೇ ಶಿಲಾನ್ಯಾಸ ನಡೆಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪೇಜಾವರ ಮಠದ ದಿವಾನ ಸುಬ್ರಹ್ಮಣ್ಯ ಭಟ್ ಸಗ್ರಿ, ದೇವಳದ ಸಾರ್ವಜನಿಕ ಸಂಪರ್ಕಾಧಿಕಾರಿ ಹರೀಶ ಸರಳಾಯ ಉಪಸ್ಥಿತರಿದ್ದರು.