ಮೊಳಹಳ್ಳಿ: ಐತಿಹಾಸಿಕ ಪುರಾಣ ಪ್ರಸಿದ್ಧ ಮೊಳಹಳ್ಳಿ ಕಂಬಳ ಮಹೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಸುಮಾರು 200 ವರ್ಷಗಳಕ್ಕಿಂತಲೂ ಹಳೆಯ ಇತಿಹಾಸ ಹೊಂದಿರುವ ಕಂಬಳ ಮಹೋತ್ಸವ ಈ ಬಾರಿ ವಿಜೃಂಭಣೆಯಿಂದ ನಡೆಯಲು ಸಜ್ಜಾಗಿದೆ. ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಳಹಳ್ಳಿ ಕಂಬಳ ಡಿ. 12 ರಂದು ಸೋಮವಾರ ಮಧ್ಯಾಹ್ನದಿಂದ ಪ್ರಾರಂಭವಾಗಲಿದೆ.
ಕುಂದಾಪುರ ತಾಲೂಕಿನ ಬಹುದೊಡ್ಡ ಗ್ರಾಮಗಳಲ್ಲಿ ಮೊಳಹಳ್ಳಿ ಎಂಬ ಊರು ಹೆಸರುವಾಸಿ. ಅಲ್ಲದೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಿಂತನೆಯುಳ್ಳ ಗ್ರಾಮವಾಗಿ ಬೆಳೆದಿದೆ. ಮೊಳಹಳ್ಳಿ ಗ್ರಾಮ ‘ಸುವರ್ಣ ಗ್ರಾಮ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದಲ್ಲದೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ವಿಶಿಷ್ಟತೆಯನ್ನ ಸಾರುವ ಮೊಳಹಳ್ಳಿ ಗ್ರಾಮ ಇಂದಿಗೂ ಭತ್ತ,ತೆಂಗು, ಅಡಿಕೆ, ತರಕಾರಿಗಳನ್ನು ಬೆಳೆದು ಕೃಷಿಕರಾಗಿಯೇ ಮುಂದುವರಿಯುತ್ತಿರುವುದು ಇನ್ನೊಂದು ಹೆಗ್ಗಳಿಕೆ. ಬ್ರಹ್ಮ ಬಂಟ ಶಿವರಾಯ ನೆಲೆ ಕಂಡ ತವರೂರು ಮೊಳಹಳ್ಳಿ.
ಸಹಕಾರಿ ಸಂಘದ ಪಿತಾಮಹ ಮೊಳಹಳ್ಳಿ ಶಿವರಾಯರಂತ ಗಣ್ಯ ವ್ಯಕ್ತಿಗಳ ನಾಮತೆತ್ತ ಗ್ರಾಮ, ಮೂಲಭೂತ ಸೌಕರ್ಯಗಳು ವಿಶಿಷ್ಟ ಪ್ರಮಾಣದಲ್ಲಿ ಗ್ರಾಮದ ಉನ್ನತಿಕರಣ ಸಾಗುತ್ತಿದ್ದು, ಅದಲ್ಲದೆ ಸಾಂಪ್ರದಾಯಿಕ ಕಾರ್ಯಕ್ರಮಗಳು ಇಂದಿಗೂ ಊರಿನ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ನಡೆಯುತ್ತಿದೆ. ಕಂಬಳ ಮಹೋತ್ಸವ, ಜಾತ್ರಾ ಮಹೋತ್ಸವ, ಯಕ್ಷಗಾನ, ಭಜನೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮ ಮಟ್ಟದಲ್ಲಿ ನಡೆಯುತ್ತಿದೆ. ಅದೇ ರೀತಿ ಮೊಳಹಳ್ಳಿ ಕಂಬಳ ಮಹೋತ್ಸವ ಈ ಬಾರಿ ವಿಜೃಂಭಣೆಯಿಂದ ವಿಶಿಷ್ಟವಾಗಿ ನಡೆಯಲು ಕ್ಷಣಗಣನೆ ಪ್ರಾರಂಭವಾಗಿದೆ. ಮೊಳಹಳ್ಳಿ ಕಂಬಳಗದ್ದೆ ವಿಸ್ತೀರ್ಣ ಸುಮಾರು 5 ಎಕರೆ ಹೊಂದಿದೆ. ಕಂಬಳದ ಸಮಿತಿಯನ್ನು ರಚಿಸಿ. ಕಂಬಳ ಮಹೋತ್ಸವಕ್ಕೆ ಸಿದ್ಧತೆಯನ್ನ ಮಾಡಿಕೊಳ್ಳಲಾಗಿದೆ.
ಮೊಳಹಳ್ಳಿ ಕಂಬಳದ ಐತಿಹಾಸಿಕ ಹಿನ್ನೆಲೆ:
ಮೊಳಹಳ್ಳಿ ಕಂಬಳ ಮಹೋತ್ಸವ ಪಾರಂಪರಿಕವಾಗಿ ನಡೆಯುತ್ತಿದ್ದು ,ಮೊಳಹಳ್ಳಿ ಒಂಬತ್ತು ಮನೆಯವರ ಸಹಯೋಗದೊಂದಿಗೆ ನಡೆಯುತ್ತಿತ್ತು. ವರ್ಷ ಪ್ರತಿ ವಿಶೇಷ ರೀತಿಯಲ್ಲಿ ಡಿಸೆಂಬರ್ ಮಾಸದಲ್ಲಿ ಕಂಬಳ ನಡೆಯುತ್ತಿತ್ತು. ನಿಗದಿಯಂತೆ ಕಂಬಳ ಮಹೋತ್ಸವಕ್ಕೆ ಕುಟುಂಬದ ಪರಿವಾರ ಜಾಗವನ್ನು ಕೂಡ ಮೀಸಲಿಡಲಾಗಿತ್ತು. ತದನಂತರದಲ್ಲಿ ಗ್ರಾಮ ಮಟ್ಟದಲ್ಲಿ ಕೋಣಗಳ ಕೊರತೆಯಿಂದಾಗಿ, ಸರ್ಕಾರದ ಕಾನೂನು ಅನ್ವಯ, ಕಂಬಳ ಮಹೋತ್ಸವ ನಿಂತು, ವರ್ಷ ಪ್ರತಿ ಕಂಬಳ ನಡೆಯುವ ದಿನ ಕಂಬಳಗದ್ದೆಗೆ ಪೂಜೆ ಮಾಡಿ ಕೈ ಬಿಡಲಾಗುತ್ತಿತ್ತು. ಮೊಳಹಳ್ಳಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಕುಟುಂಬದ ಸದಸ್ಯರಿಗೆ ಕಂಬಳ ನಿಲ್ಲಿಸಿದ್ದರ ಬಗ್ಗೆ ವಾಗ್ದಾನ ಎದ್ದಿದ್ದು, ನಿರಂತರವಾಗಿ ಕಂಬಳ ಮತ್ತು ನವರಾತ್ರಿ ಮಹೋತ್ಸವವನ್ನು ಆಚರಿಸಲೇಬೇಕೆಂದು ದೇವರ ನುಡಿ ಪ್ರಸಾದ ಬಂದಿತ್ತು.
ಈ ಬಾರಿ ಕಂಬಳ ಮಹೋತ್ಸವಕ್ಕೆ 40 ಜೊತೆ ಕಂಬಳ ಬರುವ ಕೋಣಗಳು ಬರುವ ನಿರೀಕ್ಷೆ ಇದೆ. ಹಗ್ಗ ಮತ್ತು ಹಲಗೆ ವಿಭಾಗದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಇದರಲ್ಲಿ ಪ್ರಥಮ ಮತ್ತು ದ್ವಿತೀಯ ವಿಭಾಗದಲ್ಲಿ ಆಯ್ಕೆ ಮಾಡಲಾಗುತ್ತದೆ. ಕಿರಿಯ ವಿಭಾಗ ಮತ್ತು ಅತಿ ಕಿರಿಯ ವಿಭಾಗದಲ್ಲಿಯೂ ಕೂಡ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ನೀಡಲಾಗುತ್ತದೆ. ಒಟ್ಟು ಆರು ಬಹುಮಾನಗಳನ್ನ ಇಟ್ಟಿರುತ್ತಾರೆ ಇದರ ವೆಚ್ಚ ಒಟ್ಟು 55 ಸಾವಿರ ರೂ.
ಸ್ಪರ್ಧೆಯ ವಿವರ:
ಹಲಗೆಯ ವಿಭಾಗ ಪ್ರಥಮ ಬಹುಮಾನ:10,000.00, ದ್ವಿತೀಯ ಬಹುಮಾನ :7000.00, ಹಗ್ಗ ಹಿರಿಯ ವಿಭಾಗ: ಪ್ರಥಮ ಬಹುಮಾನ :10,000.00,ದ್ವಿತೀಯ ಬಹುಮಾನ:7,000.00 ,ಹಗ್ಗ ಕಿರಿಯ ವಿಭಾಗ ಪ್ರಥಮ ಬಹುಮಾನ :7,000.00 ದ್ವಿತೀಯ ಬಹುಮಾನ :5,000.00,ಅತಿ ಕಿರಿಯ ವಿಭಾಗ : ಪ್ರಥಮ ಬಹುಮಾನ:7,000.00 ದ್ವಿತೀಯ ಬಹುಮಾನ :5,000
ಬ್ರಿಟಿಷರ ಕಾಲದಿಂದಲೂ ಮೊಳಹಳ್ಳಿ ಗ್ರಾಮದ ಪಟೇಲರ ಮನೆ ರಾಮಣ್ಣ ಶೆಟ್ಟಿ ಎನ್ನುವ ವ್ಯಕ್ತಿ ಪಟೇಲರಾಗಿ ಆಳ್ವಿಕೆ ನಡೆಸುತ್ತಿದ್ದರು. ಅವರ ಕಾಲದ ನಂತರ ಅವರ ಅಳಿಯ ಆಳ್ವಿಕೆ ನಡೆಸುತ್ತಿದ್ದರು. ಸ್ಪರ್ಧೆಗಾಗಿ ಬಂದ ಕೋಣಗಳಿಗೆ ಹರಿವಾಣ, ಎಳನೀರು, ಒಂದು ಕೆಜಿ ಹುರುಳಿಯನ್ನು ಗೌರವ ಸೂಚಕವಾಗಿ ನೀಡಲಾಗುತ್ತದೆ. ಕಂಬಳದ ದಿನ ರಾಹುತರ ಮನೆಯಲ್ಲಿ, ಸ್ವಾಮಿ ಮನೆಯಲ್ಲಿ, ನಾಗದೇವತೆ, ನಂದಿಕೇಶ್ವರ ಸನ್ನಿಧಾನದಲ್ಲಿ ವರ್ಷ ಪ್ರತಿಯಂತೆ ನಡೆಯುವ ಪೂಜೆ ನಡೆಯಲೇಬೇಕು. ಅದೇ ದಿನ ರಾತ್ರಿ ಕಂಬಳ ಮಹೋತ್ಸವ ಸಂಪನ್ನಗೊಂಡ ಮೇಲೆ ಉಮಾಮಹೇಶ್ವರ ದೇವಸ್ಥಾನದಲ್ಲಿ ರಂಗ ಪೂಜೆ ನೆರವೇರಬೇಕು.
ಐತಿಹಾಸಿಕ ಕಂಬಳ ಮಹೋತ್ಸವಕ್ಕೆ ಸಮಸ್ತ ಗ್ರಾಮಸ್ಥರು, ಊರ-ಪರವೂರಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಂಬಳ ಮಹೋತ್ಸವ ಚಂದಗಾಣಿಸಿ ಕೊಡಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ಪಟೇಲರ ಮನೆ ನಾರಾಯಣ ಶೆಟ್ಟಿ ತಿಳಿಸಿದ್ದಾರೆ.