ಹಿರಿಯ ಪತ್ರಕರ್ತ, ಕಲಾ ವಿಮರ್ಶಕ ಎ.ಈಶ್ವರಯ್ಯ ನಿಧನ

ಉಡುಪಿ: ಹಿರಿಯ ಪತ್ರಕರ್ತ, ಕಲಾ ವಿಮರ್ಶಕ ಎ.ಈಶ್ವರಯ್ಯ (78) ಭಾನುವಾರ ಬೆಳಿಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಛಾಯಾಗ್ರಾಹಕರೂ ಆಗಿದ್ದ ಅವರಿಗೆ ಇಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದರು.

ಮೂತ್ರಪಿಂಡ ವೈಫಲ್ಯದಿಂದ ತೀವ್ರ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡಿದ್ದ ಅವರು ಸುಧಾ, ಮಯೂರ, ಕಸ್ತೂರಿ ಪತ್ರಿಕೆಗಳಿಗೆ 50ಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದರು. ಉದಯವಾಣಿ ಮೂಲಕ ಪತ್ರಿಕಾ ವೃತ್ತಿ ಆರಂಭಿಸಿ, ಕಲಾವಿಮರ್ಶಕರಾಗಿ ಹೆಸರು ಮಾಡಿದ್ದರು. ಬಳಿಕ ತುಷಾರ ಮಾಸಪತ್ರಿಕೆಯ ಸಂಪಾದಕರಾಗಿದ್ದರು.

ಸಂಗೀತ ಕ್ಷೇತ್ರದಲ್ಲೂ ಆಸಕ್ತಿ ಹೊಂದಿದ್ದ ಈಶ್ವರಯ್ಯ ಅವರು ರಾಗಧ್ವನಿ ಸಂಸ್ಥೆ ಸ್ಥಾಪಿಸಿದರು. ತಿಂಗಳಿಗೊಮ್ಮೆ ‘ಮನೆಮನೆ ಸಂಗೀತ’ ಕಾರ್ಯಕ್ರಮ ಪ್ರಸಿದ್ಧಿ ಪಡೆದಿತ್ತು. ರಾಗಧನಶ್ರೀ ಸಂಗೀತ ಮಾಸಿಕದ ಸಂಪಾದಕರೂ ಆಗಿದ್ದರು.

ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಪರಶುರಾಮ ಪ್ರಶಸ್ತಿ, ಪೋಳ್ಯ ಯಕ್ಷಗಾನ ಪ್ರಶಸ್ತಿ, ಸಂದೇಶ ಪತ್ರಿಕೋದ್ಯಮ ಸಮ್ಮಾನ, ವ್ಯಾಸ ಸಾಹಿತ್ಯ ಪ್ರಶಸ್ತಿ ಹಾಗೂ ನುಡಿಸಿರಿ ರಾಜ್ಯ ಪ್ರಶಸ್ತಿಗಳು ಅವರಿಗೆ ಸಂದಿವೆ.