ಹಿರಿಯಡ್ಕ: ಗುಂಡಿಗಳ ರಸ್ತೆ ನವೀಕರಿಸುವಂತೆ ವಿಷ್ಣುಪ್ರಸಾದ್ ಕೊಡಿಬೆಟ್ಟು ಮನವಿ

ಉಡುಪಿ: ಹಿರಿಯಡ್ಕ ಪೇಟೆ ಭಾಗದ ಮುಖ್ಯರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ಸಂಚರಿಸುವ ವಾಹನಗಳಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.

ಹಿರಿಯಡ್ಕದ ಕೋಟ್ನಕಟ್ಟೆಯಿಂದ ಹಳೆ ಪೊಲೀಸ್ ಸ್ಟೇಷನ್ ವರೆಗೆ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ಉಳಿದ ಭಾಗದಲ್ಲಿ ರಸ್ತೆಯು ನವೀಕರಣಗೊಂಡಿದ್ದು, ಹೃದಯ ಭಾಗದಲ್ಲಿ ಹೊಂಡಗಳಿಂದ ರಸ್ತೆಯನ್ನೇ ಹುಡುಕುವ ಪರಿಸ್ಥಿತಿ ಉಂಟಾಗಿದೆ.
“ಇತ್ತೀಚಿಗಷ್ಟೇ ರಸ್ತೆಗೆ ತೇಪೆ ಹಾಕಲಾಗಿದ್ದು ಮಳೆಗೆ ಮತ್ತೆ ಹೊಂಡಗಳು ನಿರ್ಮಾಣವಾಗಿದೆ. ಹಲವು ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ರಸ್ತೆಯ ಗುಂಡಿಗಳಿಂದಾಗಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆಗಳು ಅಲ್ಲಲ್ಲಿ ನಡೆದಿದೆ.

ಕಾರ್ಕಳ-ಉಡುಪಿ ಮಾರ್ಗವಾಗಿ ಸಾವಿರಾರು ವಾಹನಗಳು ದಿನನಿತ್ಯ ಸಂಚರಿಸುತ್ತವೆ. ಅನಾಹುತ ನಡೆಯುವ ಮುನ್ನ ಎಚ್ಚೆತ್ತುಕೊಂಡು ಶೀಘ್ರದಲ್ಲಿ ರಸ್ತೆಯ ನವೀಕರಣ ಆಗಬೇಕಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತ ವಿಷ್ಣುಪ್ರಸಾದ್ ಕೊಡಿಬೆಟ್ಟು ಮನವಿ ಮಾಡಿದ್ದಾರೆ.

ಸೀಟ್ ಬೆಲ್ಟ್, ಹೆಲ್ಮೆಟ್, ಇನ್ಸೂರೆನ್ಸ್ ಎಂದು ಹುಡುಕಿ ಸವಾರರನ್ನು ನಿಲ್ಲಿಸಿ ದಂಡ ಹಾಕುವ ಮುನ್ನ ಸಂಚಾರ ವ್ಯವಸ್ಥೆಯನ್ನು ಮೊದಲು ಸರಿಪಡಿಸಿ. ರಸ್ತೆಯ ದುರಾವಸ್ಥೆಯಿಂದಾಗಿ ಪ್ರಾಣಹಾನಿಯಾದರೆ ಯಾರು ಹೊಣೆ? ಯಾರಿಗೆ ದಂಡ ಹಾಕಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.