ಉಡುಪಿ : ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಲೇಖಕಿಯರ ಸಂಘದ ಸಹಯೋಗದಲ್ಲಿ ಮಹಿಳಾ ಸಬಲೀಕರಣ, ವಿಚಾರ ಸಂಕಿರಣ, ಸಂವಾದ ಮತ್ತು ಆತ್ಮೀಯ ಸಮ್ಮಿಲನ ಕಾರ್ಯಕ್ರಮವು ನಡೆಯಿತು.
ಕಾಲೇಜಿನ ಪ್ರಾಂಶುಪಾಲೆ ಮತ್ತು ಉಡುಪಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ನಿಕೇತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಮಹಿಳೆಯರ ಬಗ್ಗೆ ಗೌರವ ಮತ್ತು ಸಂವೇದನಾ ಶೀಲತೆಯನ್ನು ಬೆಳೆಸಿಕೊಂಡು ಸೌಹಾರ್ದಯುತ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದರು.
ಸಾಹಿತಿ ಮತ್ತು ಉಪನ್ಯಾಸಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಿಳಾ ಸಬಲೀಕರಣ ಕುರಿತು ಪ್ರಾಚೀನ ಕಾಲದಿಂದ ಪ್ರಸ್ತುತದವರೆಗೆ ನಡೆದ ಪ್ರಯತ್ನಗಳನ್ನು ವಿವರಿಸಿದರು.
ಲೇಖಕಿ ಮತ್ತು ಉಡುಪಿ ಜಿಲ್ಲಾ ಲೇಖಕಿಯರ ಸಂಘದ ಸ್ಥಾಪಕ ಅಧ್ಯಕ್ಷೆ ವಸಂತಿ ಶೆಟ್ಟಿ, ಬ್ರಹ್ಮಾವರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮಹಿಳಾ ಸಬಲೀಕರಣ ಕುರಿತು ಕವನ ವಾಚಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮಹಿಳಾ ಸಾಧಕಿಯರಾದ ವಸಂತಿ ಶೆಟ್ಟಿ ಬ್ರಹ್ಮಾವರ ಮತ್ತು ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಇವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸುಜಯಾ ಕೆ.ಎಸ್, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕಿ ಸುಮನಾ .ಬಿ, ದೈಹಿಕ ಶಿಕ್ಷಣ ನಿರ್ದೇಶಕಿ ಸವಿತಾ, ವಿದ್ಯಾರ್ಥಿ ಪ್ರತಿನಿಧಿ ಸುಪ್ರಿತಾ ಉಪಸ್ಥಿತರಿದ್ದರು. ಸುಜಯಾ ಕೆ.ಎಸ್ ಸ್ವಾಗತಿಸಿದರು, ವಿದ್ಯಾರ್ಥಿನಿ ಅನುಷಾ ನಿರೂಪಿಸಿದರು, ವಿಜಯ ಶ್ರೀ ಪೈ ವಂದಿಸಿದರು.