ಉಡುಪಿ: ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ವಾರ್ಷಿಕ ಸಿರಿ ಜಾತ್ರೆ ವೈಭವದಿಂದ ಸಂಪನ್ನಗೊಂಡಿತು.
ದೇವಸ್ಥಾನದ ಪರ್ಯಾಯ ತಂತ್ರಿಗಳಾದ ಗುರುರಾಜ ತಂತ್ರಿ ಹಾಗೂ ಅರ್ಚಕರಾದ ಅನಂತ ಅಡಿಗ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ದೇವಳದ ಅರ್ಚಕರು ಧ್ವಜಸ್ತಂಭದ ಎದುರು ಪಾತ್ರಿಗಳಿಗೆ ಸಿಂಗಾರದ ಹೂವನ್ನು ನೀಡುವ ಮೂಲಕ ದರ್ಶನ ಸೇವೆಗೆ ಚಾಲನೆ ನೀಡಿದರು. ಉಡುಪಿ ಹಾಗೂ ಹೊರ ಜಿಲ್ಲೆಯಿಂದ ಆಗಮಿಸಿದ ಭಕ್ತರು ಸಿರಿ ಜಾತ್ರೆಯ ವೈಭವವನ್ನು ಕಣ್ತುಂಬಿಕೊಂಡರು.

ಬೆಳಗ್ಗೆ ಧ್ವಜಾರೋಹಣ, ಸಂಜೆ ಆರಾಧನಾ ಪೂಜೆ, ಪೂರ್ಣಿಮಾ ಉತ್ಸವ, ಹಾಲು ಹಬ್ಬ ಸೇವೆ, ಸವಾರಿ ಬಲಿ, ಬ್ರಹ್ಮಲಿಂಗೇಶ್ವರನಿಗೆ ಪ್ರಿಯವಾದ ಬ್ರಹ್ಮಮಂಡಲ, (ಢಕ್ಕೆಬಲಿ) ಭೂತ ಬಲಿ ನಡೆಯಿತು. ಕಂಚಿಲಸೇವೆ, ತೊಟ್ಟಿಲ ಸೇವೆ ಮುಂತಾದ ಹರಕೆಯನ್ನು ಭಕ್ತರು ದೇವರಿಗೆ ಸಮರ್ಪಿಸಿದರು. ಭಕ್ತರು ದೇವರಿಗೆ ಸಮರ್ಪಿಸಿದ ಮೂಡೆ, ತೆಂಗಿನ ಹಾಲು ಸಹಿತ ಅನ್ನ ಸಂತರ್ಪಣೆ ನಡೆಯಿತು.
ಜಿಲ್ಲೆಯ ಪ್ರಸಿದ್ದ ಆಲಡೆ ಕ್ಷೇತ್ರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನವು ಉಡುಪಿ ಹಾಗೂ ಸುತ್ತಮುತ್ತಲಿನ ಜಿಲ್ಲೆಯ ಸಾವಿರಾರು ಕುಟುಂಬಗಳಿಗೆ ಆದಿ ಸ್ಥಳವೂ ಆಗಿದೆ. ಆದ್ದರಿಂದ ಭಕ್ತರು ದೇವರಿಗೆ ಸೀಯಾಳ ಮತ್ತು ಸಿಂಗಾರದ ಹೂವನ್ನು ಸಮರ್ಪಿಸುವುದು ಇಲ್ಲಿನ ವಾಡಿಕೆ.












