ಹಿರಿಯಡ್ಕ: ಮನೆ ಕಂಪೌಂಡು ಕಟ್ಟುವ ವಿಚಾರದಲ್ಲಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಹಿರಿಯಡ್ಕ ಪೊಲೀಸರು ನ.15ರಂದು ಬಂಧಿಸಿದ್ದಾರೆ.
ಹಿರಿಯಡ್ಕ ನಿವಾಸಿ ಹುಸೇನ್ ಶೇಖ್ ಅಹಮ್ಮದ್(74), ಮುಂಬೈಯ ತಮೀಮ್ ಹುಸೇನ್ ಶೇಖ್(34) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಕಬ್ಬಿಣದ ಕಟ್ಟರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ರಫೀಕ್ ಮತ್ತು ಅವರ ಮಗ ಶಾರೀಕ್ ನ.11ರಂದು ಮನೆಯ ಸುತ್ತಲೂ ಕಂಪೌಂಡ್ ಕಟ್ಟಿಸುತ್ತಿರುವಾಗ ಆರೋಪಿಗಳಾದ ಹುಸೇನ್ ಮತ್ತು ಅವರ ಮಗ ತಮೀಮ್ ಕಾರಿನಲ್ಲಿ ಬಂದು ಕಂಪೌಂಡ್ ಕಟ್ಟುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆಯೊಡ್ಡಿ, ಶಾರೀಕ್ ಅವರನ್ನು ಕೊಲ್ಲುವ ಉದ್ದೇಶದಿಂದ ಬೆನ್ನಿನ ಭಾಗಕ್ಕೆ ಹಲವು ಬಾರಿ ಚಾಕುವಿನಿಂದ ಚುಚ್ಚಿರುವುದಾಗಿ ದೂರಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


















