ಹಿರಿಯಡಕ ಶ್ರೀ ವೀರಭದ್ರಸ್ವಾಮಿ ದೇಗುಲ: ಸಂಭ್ರಮದ ಸಿರಿ ಜಾತ್ರೆ ಸಂಪನ್ನ

ಉಡುಪಿ: ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇಗುಲದ ವಾರ್ಷಿಕ ಸಿರಿ ಜಾತ್ರೆ ವಿಜೃಂಭಣೆಯಿಂದ ಸಂಪನ್ನಗೊಂಡಿತು. ತಂತ್ರಿ ಲಕ್ಷ್ಮೀನಾರಾಯಣ ಚಡಂಗ ಹಾಗೂ ಅರ್ಚಕರಾದ ರಂಗನಾಥ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇಗುಲದ ಅರ್ಚಕರು ಧ್ವಜಸ್ತಂಭದ ಎದುರು ಪಾತ್ರಿಗಳಿಗೆ ಸಿಂಗಾರದ ಹೂ ನೀಡುವ ಮೂಲಕ ದರ್ಶನ ಸೇವೆಗೆ ಚಾಲನೆ ನೀಡಿದರು.

ಸಾವಿರಾರು ಭಕ್ತರು ವಾರ್ಷಿಕ ಸೇವೆ ಸಮರ್ಪಿಸಿದರು.ಬೆಳಿಗ್ಗೆ ಧ್ವಜಾರೋಹಣ, ಸಂಜೆ ಆರಾಧನ ಪೂಜೆ, ಪೂರ್ಣಮಾ ಉತ್ಸವ, ಹಾಲು ಹಬ್ಬ ಸೇವೆ, ಸವಾರಿ ಬಲಿ, ಬ್ರಹ್ಮಲಿಂಗೇಶ್ವರನಿಗೆ ಪ್ರಿಯವಾದ ಬ್ರಹ್ಮ ಮಂಡಲ (ಢಕ್ಕೆಬಲಿ), ಭೂತ ಬಲಿ ನಡೆಯಿತು.

ಕಂಚಿಲ ಸೇವೆ, ತೊಟ್ಟಿಲ ಸೇವೆ ಮುಂತಾದ ಹರಕೆಯನ್ನು ಹೊತ್ತ ಭಕ್ತರು ಶ್ರದ್ಧಾ ಭಕ್ತಿಯಿಂದ ಹರಕೆಯನ್ನು ಸಮರ್ಪಿಸಿದರು. ಸಾವಿರಾರು ಭಕ್ತರಿಗೆ ದೇವರಿಗೆ ಸಮರ್ಪಿಸಿದ ಮೂಡೆ ತೆಂಗಿನ ಹಾಲು ಸಹಿತ ಅನ್ನಸಂತರ್ಪಣೆ ನಡೆಯಿತು.

ಆಡಳಿತ ಅಧಿಕಾರಿ ಪಿ.ಆರ್. ಗುರುರಾಜ್‌ ಉಪಸ್ಥಿತರಿದ್ದರು. ಜಿಲ್ಲೆಯ ಪ್ರಸಿದ್ದ ಆಲಡೆ ಕ್ಷೇತ್ರ ಹಿರಿಯಡಕ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಉಡುಪಿ ಹಾಗೂ ಸುತ್ತಮುತ್ತಲ ಜಿಲ್ಲೆಯ ಸಾವಿರಾರು ಕುಟುಂಬಗಳಿಗೆ ಆದಿ ಸ್ಥಳವೂ ಹೌದು.

ಸಾವಿರಾರು ಕುಟುಂಬಗಳು ಕ್ಷೇತ್ರಕ್ಕೆ ಬಂದು ದೇವರಿಗೆ ಸಿಯಾಳ ಮತ್ತು ಸಿಂಗಾರ ಸಮರ್ಪಿಸುವುದು ಇಲ್ಲಿನ ವಾಡಿಕೆ.