ಉಡುಪಿ, ಜುಲೈ 19: ವಿದ್ಯಾರ್ಥಿಗಳು ತಮ್ಮ ಅಮೂಲ್ಯ ವಿದ್ಯಾರ್ಥಿ ಜೀವನವನ್ನು ಅಧ್ಯಯನ ಶೀಲತೆಯ ಮೂಲಕ ಸದುಪಯೋಗ ಪಡಿಸಿಕೊಳ್ಳುವಂತೆ ಸಾಫಲ್ಯ ಟ್ರಸ್ಟ್ ನ ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಅವಿಭಜಿತ ದಕ್ಷಣ ಕನ್ನಡ ಜಿಲ್ಲೆಯ ನೂತನ ಸಮಾಜ ಸೇವಾ ಸಂಸ್ಥೆ “ಸಾಫಲ್ಯ ಟ್ರಸ್ಟ್” ವತಿಯಿಂದ ಕೊಡುಗೆಯಾಗಿ ನೀಡಿರುವ ಆಧುನಿಕ “ಶುದ್ಧ ಕುಡಿಯುವ ನೀರಿನ ಘಟಕ”ವನ್ನು ಉದ್ಘಾಟಿಸಿ, ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಫಲ್ಯ ಟ್ರಸ್ಟ್ನ ಕಾರ್ಯದರ್ಶಿ ಇಂದೂ ರಮಾನಂದ ಭಟ್ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಜೊತೆಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಸಾಫಲ್ಯ ಟ್ರಸ್ಟ್ನ ಸದಸ್ಯೆ ಡಾ.ಅಮೀನಾ ಮಾತನಾಡಿ, ಸಮಾಜವು ನಮ್ಮನ್ನು ಗುರುತಿಸುವಂತಹ ಸಾಧನೆಯನ್ನು ಮಾಡುವ ಮಹತ್ವಾಕಾಂಕ್ಷೆಯನ್ನು ವಿದ್ಯಾರ್ಥಿ ಸಮೂಹ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ, ಅಧ್ಯಕ್ಷತೆ ವಹಿಸಿ, ಮಾತನಾಡಿ, ಸಾಫಲ್ಯ ಟ್ರಸ್ಟ್ ನ ಸಮಾಜ ಸೇವಾಕಾರ್ಯವು ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಮತ್ತು ಸಾಫಲ್ಯ ಟ್ರಸ್ಟ್ನ ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿಯವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಸಾಫಲ್ಯ ಟ್ರಸ್ಟ್ನ ಕೋಶಾಧಿಕಾರಿ ಮಮತಾ ದಿವಾಕರ್ ಶೆಟ್ಟಿ, ಸದಸ್ಯರಾದ ಹರಿಣಿ, ಅನುರಿತಾ, ಶೈಲಶ್ರೀ, ಪ್ರಿಯಾರಾಮದಾಸ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸುಜಯಾ ಕೆ., ಬೋಧಕ-ಬೋಧಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುಜಯಾ ಕೆ. ಸ್ವಾಗತಿಸಿದರು, ಸುಮನಾ ಬಿ. ವಂದಿಸಿದರು, ಸುಭಾಷ್ ಹೆಚ್.ಕೆ. ಕಾರ್ಯಕ್ರಮ ನಿರೂಪಿಸಿದರು.