ಹಿರಿಯಡ್ಕ: ಆರೋಗ್ಯವಂತ ಶಿಶು ಪ್ರದರ್ಶನ, ವಿಶ್ವ ಜನಸಂಖ್ಯಾ ದಿನಾಚಾರಣೆ

ಉಡುಪಿ, ಜುಲೈ 17: ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯಡ್ಕ, ಲಯನ್ಸ ಕ್ಲಬ್ ಹಿರಿಯಡ್ಕ ಹಾಗೂ ಲಯನ್ಸ ಕ್ಲಬ್ ಇಂದ್ರಾಳಿ ಇವರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಮತ್ತು ವಿಶ್ವ ಜನಸಂಖ್ಯಾ ದಿನಾಚಾರಣೆ ಕಾರ್ಯಕ್ರಮವು ಬುಧವಾರ ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗಿತು.
ಜಿಲ್ಲಾ ಪಂಚಾಯತ್ ಸದಸ್ಯೆ ಚಂದ್ರಿಕಾ ಕೇಲ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯಡ್ಕ ಲಯನ್ಸ ಕ್ಲಬ್ ಅಧ್ಯಕ್ಷ ಮೋಹನ್‍ದಾಸ್ ಆಚಾರ್ಯ ಮತ್ತು ಇಂದ್ರಾಳಿ ಲಯನ್ಸ ಕ್ಲಬ್ ಅಧ್ಯಕ್ಷ ಹೃಷಿಕೇಶ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಕರಪತ್ರವನ್ನು ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮೀ ನಾರಾಯಣ ಪ್ರಭು, ಕ್ಷಯ ರೋಗದ ಎ.ಸಿ.ಎಫ್. ಕರಪತ್ರವನ್ನು ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಸಾಲಿಯಾನ್ ಬಿಡುಗಡೆಗೊಳಿಸಿದರು.


ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸತ್ಯ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆರೋಗ್ಯವಂತ ಶಿಶುಗಳ ಪ್ರದರ್ಶನದಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು, ತಾಯಂದಿರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಹಾಗೂ ಇಲಾಖಾ ಸಿಬ್ಬಂದಿಯವರು ಉಪಸ್ಥಿತರಿದ್ದರು. ವಿಜಯಬಾಯಿ.ಕೆ ಸ್ವಾಗತಿಸಿ, ನಿರೂಪಿಸಿದರು. ಬಸವರಾಜ್ ಜಾಡರ್ ವಂದಿಸಿದರು.