ಹಿರಿಯಡಕ: ಮಾತೃಭಾಷಾ ದಿನಾಚರಣೆ ಕಾರ್ಯಕ್ರಮ

ಉಡುಪಿ, ಫೆ. 20: ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ ಇದರ ಆಶ್ರಯದಲ್ಲಿ ಅಮೋಘ(ರಿ.), ಹಿರಿಯಡಕ ಇವರ ಸಹಯೋಗದೊಂದಿಗೆ ಗುರುವಾರ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ನಿಕೇತನ ಇವರು ತುಳುನಾಡಿನ ಸಂಸ್ಕೃತಿಯ ಶ್ರೇಷ್ಠ ಮೌಲ್ಯಗಳನ್ನು ಸಾರುವ ಸಿರಿಕಥಾನಕದ ಮಹತ್ವದ ಕುರಿತು ಮಾತನಾಡುತ್ತಾ ‘ಮಾತೃಭಾಷೆ ಮತ್ತು ಸಂಸ್ಕೃತಿಯ ಅರಿವಿನ ಔಚಿತ್ಯ’ದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಂಗವಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಅಮೋಘ (ರಿ.) ಹಿರಿಯಡಕ ಇದರ ನಿರ್ದೇಶಕಿ ಪೂರ್ಣಿಮಾ ಸುರೇಶ್ ಇವರು ‘ಸತ್ಯಾನಾಪುರದ ಸಿರಿ’ ಎಂಬ ಏಕವ್ಯಕ್ತಿ ನಾಟಕವನ್ನು ತಮ್ಮ ಮನೋಜ್ಞವಾದ ಅಭಿನಯದೊಂದಿಗೆ ಪ್ರಸ್ತುತಪಡಿಸಿದರು.

ಅಮೋಘ (ರಿ.) ಹಿರಿಯಡಕ ಇದರ ನಿರ್ದೇಶಕಿ ಪೂರ್ಣಿಮಾ ಸುರೇಶ್ ಇವರನ್ನು ಹಾಗೂ ಅಮೋಘ (ರಿ.) ಹಿರಿಯಡಕ ಇದರ ಕಾರ್ಯದರ್ಶಿಗಳು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಸತ್ಯಾನಂದ ನಾಯಕ್ ಹಾಗೂ ಅನಿಲ್ ಶೆಟ್ಟಿಯನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಅಮೋಘ (ರಿ.) ಹಿರಿಯಡಕ ಇದರ ಸದಸ್ಯರುಗಳು, ನಾಟಕಾಸಕ್ತರುಗಳು ಹಾಗೂ ಕಾಲೇಜಿನ ಎಲ್ಲಾ ಬೋಧಕ/ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಪವನ್, ಅರ್ಪಿತಾ, ಮೇಘನಾ, ತುಳುಕೂಟದ ವಿದ್ಯಾರ್ಥಿ ಪ್ರತಿನಿಧಿಗಳಾದ ದೀಕ್ಷಿತ್ ವಿ. ಶೆಟ್ಟಿ., ಶ್ರೀರಕ್ಷಾ ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸುಜಯಾ ಕೆ. ಎಸ್. ಸ್ವಾಗತಿಸಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಅನಿಲ್ ಕುಮಾರ್ ಕೆ. ಎಸ್. ಪ್ರಸ್ತಾವನೆಗೈದರು. ಕನ್ನಡ ಉಪನ್ಯಾಸಕ ರವಿಚಂದ್ರ ಬಾಯರಿ ನಿರೂಪಿಸಿದರು, ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕ ಪ್ರವೀಣ ಶೆಟ್ಟಿ ವಂದಿಸಿದರು.