ಉಡುಪಿ, ಆಗಸ್ಟ್ 1: ಸ್ವಾಮಿ ವಿವೇಕಾನಂದರ ಆದರ್ಶಗಳು ಸಾರ್ವಕಾಲಿಕ ಮೌಲ್ಯವನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ ಎಂದು ಮಂಗಳೂರು ರಾಮಕೃಷ್ಣ ಮಠದ ಸಂಪನ್ಮೂಲ ವ್ಯಕ್ತಿ ಶ್ರೀಕೃಷ್ಣ ಉಪಾಧ್ಯಾಯ ಆಶಿಸಿದರು.
ಅವರು ಇತ್ತೀಚೆಗೆ ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರಾಮಕೃಷ್ಣ ಮಠ ಮಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ನಡೆದ “ವಿಶ್ವವಿಜೇತ” ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ, ವಿವೇಕಾನಂದರ ರಾಷ್ಟ್ರಪ್ರೇಮ, ಪಾಂಡಿತ್ಯ, ಆತ್ಮವಿಶ್ವಾಸ ಮುಂತಾದ ಗುಣಗಳನ್ನು ಯುವ ಜನತೆ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸುಜಯಾ ಕೆ. ಎಸ್., ಎನ್.ಎಸ್.ಎಸ್. ಅಧಿಕಾರಿ ಪ್ರವೀಣ ಶೆಟ್ಟಿ, ಸುಭಾಷ್ ಎಚ್. ಕೆ. ಉಪಸ್ಥಿತರಿದ್ದರು. ಪ್ರವೀಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.












