ಹಿರ್ಗಾನದಲ್ಲಿ ಮತ್ತೊಂದು ಮಂಗ ನಿಗೂಢ ಸಾವು, ಹೆಚ್ಚಿದ ಮಂಗನ ಕಾಯಿಲೆ ಭೀತಿ

ಕುಂದಾಪುರ: ಜಿಲ್ಲೆಯ ಗಡಿಭಾಗ ಬೈಂದೂರು ಸಮೀಪದ ಶಿರೂರಿನಲ್ಲಿ ೨ ಮಂಗಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ಮಂಗಗಳ ನಿಗೂಢ ಸಾವಿನ ಸುದ್ದಿಯ ಬೆನ್ನಲ್ಲೇ ಇದೀಗ ೨ ಮಂಗಗಳು ನಿಗೂಢವಾಗಿ ಮೃತಪಟ್ಟಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಮರಣೋತ್ತರ ಪರೀಕ್ಷೆಗಾಗಿ ಮಾದರಿ:

ಶಿರೂರಿನಲ್ಲಿ ಸಾವನ್ನಪ್ಪಿರುವ ಒಂದು ಮಂಗ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇನ್ನೊಂದು ಮಂಗ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಈಗಾಗಲೆ ಹೊಸಂಗಡಿಯಲ್ಲಿ ೨, ಸಿದ್ಧಾಪುರದಲ್ಲಿ ೧, ಕಾರ್ಕಳ ಹಿರ್ಗಾನದಲ್ಲಿ ೧ ಮಂಗ ಮೃತಪಟ್ಟಿದ್ದು ಸಾವಿನ ಸಂಖ್ಯೆ ಒಟ್ಟು ಆರಕ್ಕೇರಿದೆ. ಕಾರ್ಕಳ ತಾಲೂಕಿನ ಹಿರ್ಗಾನದಲ್ಲಿ ಗುರುವಾರ ಒಂದು ಮಂಗ ಸಾವನ್ನಪ್ಪಿದ್ದು ಮರಣೋತ್ತರ ಪರೀಕ್ಷೆಗಾಗಿ ಅದರ ಮಾದರಿಗಳನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ಸಾಗರ ತಾಲೂಕಿನಲ್ಲಿ ಮಂಗನ ಕಾಯಿಲೆ ಕಂಡುಬಂದಿದ್ದು, ಇದೀಗ ಉಡುಪಿ ಜಿಲ್ಲೆಯಲ್ಲಿ ಮಂಗಗಳ ಸರಣಿ ಸಾವು ಪ್ರಕರಣ ಜಿಲ್ಲೆಯ ಜನರನ್ನು ಆತಂಕಕ್ಕೆಡೆಮಾಡಿಕೊಟ್ಟಿದೆ. ಜೊತೆಗೆ ಮಂಗಗಳ ನಿಗೂಢ ಸಾವು ಮಂಗನಕಾಯಿಲೆಗೆ ಆಸ್ಪದ ಆಗಬಹುದೆಂಬ ಆತಂಕ ಜಿಲ್ಲೆಯ ಜನರಿಗೆ ಎದುರಾಗಿದೆ.

ಕಾಯಿಲೆ ಕುರಿತು ಜನರಿಗೆ ಮಾಹಿತಿ:

ಮಂಗಗಳ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಪಶುವೈದ್ಯ ಇಲಾಖಾಧಿಕಾರಿಗಳು ಮತ್ತು ಅರಣ್ಯ ಇಲಾಖಾಧಿಕಾರಿಗಳ ತುರ್ತು ಸಭೆ ನಡೆಸಲಾಗಿದ್ದು, ಮಂಗನ ಕಾಯಿಲೆಯಿಂದ ರಕ್ಷಣೆ ಪಡೆಯಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಕುರಿತು ಜನರಿಗೆ ಮಾಹಿತಿ ಒದಗಿಸಲು ಆರೋಗ್ಯ, ಪಶು ಮತ್ತು ಅರಣ್ಯ ಇಲಾಖೆಯು ಜಂಟಿಯಾಗಿ ಕಾರ್ಯನಿರ್ವಹಿಸಲು ಸಭೆಯಲ್ಲಿ ಚರ್ಚಿಸಲಾಗಿದೆ.

ಅರಣ್ಯ ಇಲಾಖೆಯ ಸಹಕಾರದೊಂದಿಗೆ ಜಾಗೃತಿ ಕಾರ್ಯ ಹಮ್ಮಿಕೊಂಡಿದ್ದು, ಯಾರೂ ಆತಂಕಪಡಬೇಕಿಲ್ಲ, ಮುಂಜಾಗ್ರತೆ ಅನಿವಾರ್ಯ ಎಂದಿದ್ದಾರೆ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ್ ಉಡುಪ.