ಎರಡು ವರ್ಷದ ಮಗುವನ್ನು ನುಂಗಿ ಕಕ್ಕಿದ ಹಿಪ್ಪೋ: ಉಗಾಂಡಾದಲ್ಲೊಂದು ವಿಚಿತ್ರ ಘಟನೆ

ಕ್ಯಾಪಿಟಲ್ ಎಫ್‌ಎಂ ಉಗಾಂಡಾ ಪೊಲೀಸರನ್ನು ಉಲ್ಲೇಖಿಸಿ ಮಾಡಿರುವ ವರದಿಯ ಪ್ರಕಾರ ಅಂಬೆಗಾಲಿಡುತ್ತಿರುವ ಎರಡು ವರ್ಷದ ಮಗುವೊಂದು ಡಿಸೆಂಬರ್ 4 ರಂದು ಕಟ್ವೆ ಕಬಟೊರೊ ಪಟ್ಟಣದ ಸರೋವರದ ತೀರದಲ್ಲಿ ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ಹಸಿದ ಹಿಪ್ಪೋ ಒಂದು ತನ್ನ ದೊಡ್ಡ ದವಡೆಗಳಿಂದ ಅವನನ್ನು ಹಿಡಿದು ನುಂಗಲು ಪ್ರಯತ್ನಪಟ್ಟಿದೆ. ಇದನ್ನು ನೋಡಿದ ಅಲ್ಲೇ ಇದ್ದ ಕ್ರಿಸ್ಪಾಸ್ ಬಾಗೊಂಜಾ ಎಂಬ ವ್ಯಕ್ತಿ ಹಿಪ್ಪೋ ಮಗುವನ್ನು ಸಂಪೂರ್ಣವಾಗಿ ನುಂಗುವ ಮೊದಲು, ಅದರ ಮೇಲೆ ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿದ್ದಾರೆ. ಇದರಿಂದಾಗಿ ಹಿಪ್ಪೋ ಆ ಮಗುವನ್ನು ನುಂಗದೆ ಹೊರಗೆ ಕಕ್ಕಿದೆ ಎಂದು ಕ್ಯಾಪಿಟಲ್ ಎಫ್‌ಎಂ ಉಗಾಂಡಾ ವರದಿ ಮಾಡಿದೆ.

ಪೊಲೀಸರು ಅಂಬೆಗಾಲಿಡುತ್ತಿರುವ ಮಗುವನ್ನು ಇಗಾ ಪಾಲ್ ಎಂದು ಗುರುತಿಸಿದ್ದಾರೆ ಮತ್ತು ಪ್ರಾಣಿಯು ಮಗುವನ್ನು ತಲೆಯಿಂದ ಹಿಡಿದು ದೇಹದ ಅರ್ಧ ಭಾಗವನ್ನು ನುಂಗಿದೆ ಎಂದು ಹೇಳಿದ್ದಾರೆ. ಬಾಲಕನ ಕೈಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಗುವನ್ನು ತುರ್ತಾಗಿ ಸ್ಥಳೀಯ ಕ್ಲಿನಿಕ್ ಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು ಮತ್ತು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಸಾಗಿಸಲಾಯಿತು. ರೇಬೀಸ್‌ಗೆ ಲಸಿಕೆಯನ್ನು ಪಡೆದ ನಂತರ ಮಗು ಸಂಪೂರ್ಣವಾಗಿ ಚೇತರಿಸಿಕೊಂಡತು ಮತ್ತು ಡಿಸ್ಚಾರ್ಜ್ ಆಯಿತು. ನಂತರ ಆತನನ್ನು ಪೋಲೀಸರು ಪೋಷಕರಿಗೆ ಹಸ್ತಾಂತರಿಸಿದರು ಎಂದು ಉಗಾಂಡಾ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಪ್ಪೋಗಳು, ಸಸ್ಯಾಹಾರಿಗಳಾಗಿದ್ದರೂ, ತಮಗೆ ಬೆದರಿಕೆ ಉಂಟಾದ ಸಂದರ್ಭದಲ್ಲಿ ಅತ್ಯಂತ ಆಕ್ರಮಣಕಾರಿಯಾಗಿರುತ್ತವೆ. ಹಿಪ್ಪೋಗಳು ಬೋಟು, ವಾಹನ, ಇತರ ಪ್ರಾಣಿಗಳು ಮತ್ತು ಜನರ ಮೇಲೆ ಆಕ್ರಮಣ ಮಾಡುವ ಹಲವಾರು ಘಟನೆಗಳು ವರದಿಯಾಗುತ್ತಿರುತ್ತವೆ.