ವಾರಣಾಸಿ: ಜ್ಞಾನವಾಪಿ ಮಂದಿರದ ನೆಲಮಾಳಿಗೆಯಲ್ಲಿ ಸೀಲ್ ಮಾದುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಆದೇಶದ 30 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹಿಂದೂ ಅರ್ಚಕರು ‘ವ್ಯಾಸರ ನೆಲಮಾಳಿಗೆ’ಯಲ್ಲಿ ಪೂಜಾ ವಿಧಿ ವಿಧಾನಗಳನ್ನು ಕೈಗೊಂಡರು.
ಬುಧವಾರದಂದು ಜಿಲ್ಲಾ ನ್ಯಾಯಾಲಯವು ಸೀಲ್ ಮಾಡಲಾದ ಪ್ರದೇಶವನ್ನು ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸುವಂತೆ ಮತ್ತು ಪೂಜಾ ವಿಧಿ ವಿಧಾನಗಳನ್ನು ಜಿಲ್ಲಾಡಳಿತದ ಸುಪರ್ದಿಯಲ್ಲಿ ನಡೆಸುವಂತೆ ಆದೇಶ ನೀಡಿತ್ತು.
ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಂದಿರದ ಸಮೀಪವಿರುವ ಪ್ರದೇಶವು ನಿನ್ನೆ ತಡರಾತ್ರಿ ಬಿರುಸಿನ ಚಟುವಟಿಕೆಗೆ ಸಾಕ್ಷಿಯಾಗಿದೆ. ಹಿಂದೂ ಭಕ್ತರು ‘ವ್ಯಾಸ್ ಕಾ ತೆಹಕಾನಾ’ ಎಂದು ಹೆಸರಿಸಲಾದ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಮಾಡಲು ಪ್ರದೇಶವನ್ನು ತಲುಪಲು ಪ್ರಾರಂಭಿಸಿದರು.
ಹಿಂದೂ ಸಂಘಟನೆಯಾದ ರಾಷ್ಟ್ರೀಯ ಹಿಂದೂ ದಳದ ಸದಸ್ಯರು ಫಲಕದ ಮೇಲೆ ‘ಮಂದಿರ’ಪದವನ್ನು ಅಂಟಿಸುತ್ತಿರುವುದು ಕಂಡುಬಂದಿದೆ. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಪೂಜೆ ಆರಂಭವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ज्ञानवापी मंदिर काशी में माँ श्रृंगार गौरी की पूजा अर्चना से पहले गंगाजल से पूजन शुरू किया गया !
— Vikash Ahir 🇮🇳 (@iAhirVikash) February 1, 2024
#GyanvapiMandir pic.twitter.com/ef2oxMR9FY
ವ್ಯಾಸ್ ಕುಟುಂಬದ ಸದಸ್ಯರಾದ ಸೋಮನಾಥ್ ವ್ಯಾಸ್ ಅವರು 1993 ರಲ್ಲಿ ಸೀಲ್ ಮಾಡುವ ಮೊದಲು ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅರ್ಜಿದಾರ ಮತ್ತು ಕುಟುಂಬದ ಸದಸ್ಯರಾದ ಶೈಲೇಂದ್ರ ಪಾಠಕ್ ಅವರು ವಂಶಪಾರಂಪರ್ಯವಾಗಿ ಅರ್ಚಕರಾದ ತಮಗೆ ಕಟ್ಟಡ ಪ್ರವೇಶಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಒಂದು ವಾರದೊಳಗೆ ನೆಲಮಾಳಿಗೆಯೊಳಗೆ ಪ್ರಾರ್ಥನೆಯನ್ನು ನಡೆಸಬಹುದು ಎಂದು ಖಚಿತಪಡಿಸಿಕೊಳ್ಳಲು ನಿನ್ನೆ ನ್ಯಾಯಾಲಯವು ಜಿಲ್ಲಾಡಳಿತವನ್ನು ಕೇಳಿದೆ.
ಇದರ ವಿರುದ್ದ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿದಾರರು ಕೆಳನ್ಯಾಯಾಲಯಕ್ಕೆ ಹೋಗುವಂತೆ ಸಿಜೆಐ ತಿಳಿಸಿದ್ದಾರೆ ಎಂದು ವರದಿಯಾಗಿದೆ.












