ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕರಣ: ಸೂಕ್ತ ಕಾನೂನು ರಚಿಸುವಂತೆ ಗೃಹಸಚಿವರಿಗೆ ಹಿಂಜಾವೇ ಮನವಿ

ಬೆಂಗಳೂರು: ರಾಜ್ಯದಲ್ಲಿ ಲವ್ ಜಿಹಾದ್​ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲವ್ ಜಿಹಾದ್ ತಡೆಗೆ ವಿಶೇಷ ಕಾನೂನು ರೂಪಿಸುವ ಕುರಿತು ಹಿಂದುಪರ ಸಂಘಟನೆಗಳ ನಿಯೋಗವು ದೂರು ಸಲ್ಲಿಸಿ, ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದೆ. ಈ ಬಗ್ಗೆ ಸ್ಪಂದಿಸಿದ ಸಚಿವರು ಪೊಲೀಸ್ ದಳ ರಚಿಸುವ ಕುರಿತಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

ಜಯಮಹಲ್ ನ ಗೃಹ ಸಚಿವರ ಅಧಿಕೃತ ನಿವಾಸದಲ್ಲಿ ಹಿಂದೂ ಜಾಗರಣ ವೇದಿಕೆಯ ಸದಸ್ಯರು ಮನವಿಯನ್ನು ಸಲ್ಲಿಸಿದ್ದು, ಪರಿಶೀಲಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಿದ್ದು, ಲವ್ ಜಿಹಾದ್ ಮಾತ್ರ ಕಡಿಮೆಯಾಗಿಲ್ಲ. ಉತ್ತರ ಪ್ರದೇಶ ಸರಕಾರವು ಲವ್ ಜಿಹಾದ್ ವಿರೋಧಿ ವಿಶೇಷ ದಳ ರಚಿಸಿದೆ ಇದೇ ರೀತಿ ರಾಜ್ಯದಲ್ಲೂ ವಿಶೇಷ ದಳ ರಚಿಸುವಂತೆ ಹಿಂದೂ ಜಾಗರಣ ವೇದಿಕೆ ಮತ್ತು ಹಿಂದೂ ಪರ ಸಂಘಟನೆಗಳು ಸರಕಾರವನ್ನು ಆಗ್ರಹಿಸಿವೆ.

ರಾಜ್ಯದಲ್ಲಿ ಹಿಂದೂ ಮಹಿಳೆ ಮತ್ತು ಯುವತಿಯರ ನಾಪತ್ತೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಎನ್.ಐ.ಎ ಕೂಡಾ ರಾಜ್ಯದ 5 ಜಿಲ್ಲೆಗಳಲ್ಲಿ ಶಾಹೀನ್ ಗ್ಯಾಂಗ್ ಸಕ್ರಿಯವಾಗಿರುವ ಬಗ್ಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಗಳಿಂದ ಸಚಿವರಿಗೆ ಮನವಿ ನೀಡಲಾಗಿದೆ. ಮನವಿ ಸ್ವೀಕರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಹಿಂದು ಯುವತಿಯರ ಮತ್ತು ಮಹಿಳೆಯರ ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಲು ಸೂಚಿಸುತ್ತೇನೆ. ಲವ್ ಜಿಹಾದ್ ತಡೆಗೆ ವಿಶೇಷ ಪೊಲೀಸ್ ದಳ ರಚನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇನೆ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವ ಜತೆಗೆ ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಲು ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ನ್ಯೂಸ್ 18 ವರದಿ ಮಾಡಿದೆ.