ಕೊರಗಜ್ಜ ದೈವದ ಕುರಿತ ‘ಕರಿ ಹೈದ ಕರಿ ಅಜ್ಜ’ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಹಿಂದಿ ನಟ ಕಬೀರ್ ಬೇಡಿ

ಬೆಂಗಳೂರು: ಹಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಗುರುತಿಸಿಕೊಂಡಿರುವ ನಟ ಕಬೀರ್ ಬೇಡಿ ಈಗ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಸುಧೀರ್ ಅತ್ತಾವರ ನಿರ್ದೇಶನದ ‘ಕರಿ ಹೈದ.. ಕರಿ ಅಜ್ಜ..’ ಚಿತ್ರದಲ್ಲಿ ಕಬೀರ್ ಬೇಡಿ ಬಣ್ಣ ಹಚ್ಚಲಿದ್ದಾರೆ.

ಸುಧೀರ್ ಅತ್ತಾವರ ನಿರ್ದೇಶನದ ‘ಕರಿ ಹೈದ.. ಕರಿ ಅಜ್ಜ..’ ಚಿತ್ರದಲ್ಲಿ ನಟಿಸಲು ಖುಷಿಯಾಗುತ್ತಿದೆ. ‘ಕೊರಗಜ್ಜ’ ದೈವದ ಕುರಿತ ಈ ಚಿತ್ರದಲ್ಲಿ ರಾಜನ ಪಾತ್ರದಲ್ಲಿ ನಟಿಸಿದ್ದೇನೆ. ಶ್ರುತಿ, ಭವ್ಯ, ಭರತ್ ಸೂರ್ಯ ಮುಂತಾದ ಕಲಾವಿದರ ಜೊತೆ ನಟಿಸಿದ್ದು ಖುಷಿ ಕೊಟ್ಟಿದೆ ಎಂದು ಕಬೀರ್ ಬೇಡಿ ಹೇಳಿದ್ದಾರೆ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಸುಧೀರ್ ಅತ್ತಾವರ, ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು ಬಹುಪಾಲು ಚಿತ್ರೀಕರಣ ಬೆಳ್ತಂಗಡಿ ಸುತ್ತಮುತ್ತ ನಡೆದಿದೆ. ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರ ಕುಟುಂಬಕ್ಕೆ ಕೊರಗಜ್ಜನ ಮೇಲೆ ಸಿನಿಮಾ ಮಾಡುವ ಆಸೆ ಇತ್ತು. ಈ ಕಥೆಯನ್ನು ಮೆಚ್ಚಿದ ಅವರು ಅದನ್ನು ನಿರ್ಮಿಸಲು ಮುಂದಾದರು. 12ನೇ ಶತಮಾನದ ಕೊರಗಜ್ಜನ ನಿಜ ಜೀವನದ ಕಥೆಯನ್ನು ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸುತ್ತಿದ್ದೇವೆ. ಕೊರಗಜ್ಜನ ಜೀವನದ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ, ಆ ಜನಾಂಗದ ಗಣ್ಯರೊಂದಿಗೆ ಚರ್ಚಿಸಿ ಚಿತ್ರ ಮಾಡಲಾಗಿದೆ. ಭರತ್ ಸೂರ್ಯ ಕೊರಗಜ್ಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಬೀರ್ ಬೇಡಿ, ಶ್ರುತಿ, ಭವ್ಯ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿದ್ಯಾಧರ್ ಶೆಟ್ಟಿ ಅವರು ಸಂಕಲನದ ಜೊತೆಗೆ ಐತಿಹಾಸಿಕ ದಾಖಲೆ ಮತ್ತು ಪುರಾವೆಗಳನ್ನು ಸೇರಿಸಿದ್ದಾರೆ ಎಂದು ಹೇಳಿದ್ದಾರೆ.

ಕೊರಗಜ್ಜನ ಮೇಲೆ ನಮ್ಮ ಕುಟುಂಬಕ್ಕೆ ವಿಶೇಷ ಭಕ್ತಿ ಇದೆ. ಹಾಗಾಗಿ ಈ ಸಿನಿಮಾ ಮಾಡುತ್ತಿದ್ದೇವೆ. ಚಿತ್ರತಂಡದ ಪ್ರೋತ್ಸಾಹದಿಂದ ಚಿತ್ರ ಉತ್ತಮ ವಾಗಿ ಮೂಡಿಬರುತ್ತಿದೆ. ನಿರೀಕ್ಷೆಯಂತೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಹೇಳಿದ್ದಾರೆ.

ಧೃತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತ್ರಿವಿಕ್ರಮ್ ಸಪಲ್ಯ ಚಿತವನ್ನು ನಿರ್ಮಿಸಿದ್ದಾರೆ, ಪವನ್ ವಿ ಕುಮಾರ್ ಮತ್ತು ಗಣೇಶ್ ಕೇಳ್ಮನೆ ಛಾಯಾಗ್ರಾಹಕರಾಗಿ ಮತ್ತು ಸುಧೀರ್ ಮತ್ತು ಕೃಷ್ಣ ರವಿ ಸಂಗೀತ ನಿರ್ದೇಶಕರಾಗಿ ದುಡಿದಿದ್ದಾರೆ. ನಿರ್ದೇಶಕ ಸುಧೀರ್ ಅತ್ತಾವರ ಸ್ವತಃ ಕಲಾ ನಿರ್ದೇಶನ ಮಾಡುತ್ತಿದ್ದಾರೆ.