ಉಡುಪಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದ ಕಮ್ಯೂನಿಸ್ಟ್ ಸರಕಾರ ನ್ಯಾಯಾಲಯದ ತೀರ್ಮಾನವನ್ನು ಇಟ್ಟುಕೊಂಡು, ಹಠಮಾರಿ ಧೋರಣೆ ತೋರುತ್ತಿರುವುದು ಸರಿಯಲ್ಲ. ಬಹುಸಂಖ್ಯಾತ ಹಿಂದೂಗಳ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ತಲತಲಾಂತರದಿಂದ ಶಬರಿಮಲೆಯಲ್ಲಿ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯವನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಶುಕ್ರವಾರ ಪೇಜಾವರ ಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ವಿಚಾರಗಳಲ್ಲಿ ನ್ಯಾಯಾಲಯ ಅಥವಾ ಸರಕಾರ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ. ಈ ವಿಚಾರದಲ್ಲಿ ಜನರ ಭಾವನೆಗೆ ಬೆಲೆ ಕೊಡಬೇಕು. ಹಿಂದೂ ಧರ್ಮದ ಸಂಪ್ರದಾಯಗಳನ್ನು ಬದಲಾವಣೆ ಮಾಡುವ ಅಧಿಕಾರ ಯಾವುದೇ ಸರಕಾರಕ್ಕೂ ಇಲ್ಲ. ಜನರ ಮೇಲೆ ಒತ್ತಡ ತಂದು ಸಂಪ್ರದಾಯಗಳನ್ನು ಬದಲಾವಣೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶ ನಿರಾಕರಣೆ ಮಾಡುವುದರಲ್ಲಿ ಮಹಿಳಾ ವರ್ಗಕ್ಕೆ ಅಪಮಾನ ಆಗಲ್ಲ. ಬಹುಸಂಖ್ಯೆಯಲ್ಲಿ ಮಹಿಳೆಯರೇ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ವಿರೋಧ ಮಾಡುತ್ತಿವೆ. ಹಾಗಾಗಿ ಈ ವಿಚಾರದಲ್ಲಿ ಕೇರಳ ಸರಕಾರ ಹಠ ಹಿಡಿಯುವುದು ಸರಿಯಲ್ಲ. ಜನಾಭಿಪ್ರಾಯದಂತೆ ಸಂಪ್ರದಾಯಕ್ಕೆ ಮನ್ನಣೆ ನೀಡುವ ಕೆಲಸ ಮಾಡಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ಕೇರಳ ಕಮ್ಯೂನಿಸ್ಟ್ ಸರಕಾರಕ್ಕೆ ಸೋಲು ಖಚಿತ:
ಶಬರಿಮಲೆ ವಿಚಾರವನ್ನಿಟ್ಟುಕೊಂಡು ಚುನಾವಣೆಗೆ ಹೋದರೆ ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಕಮ್ಯೂನಿಷ್ಟ್ ಸರಕಾರಕ್ಕೆ ಸೋಲು ಕಟ್ಟಿಟ್ಟಬುತ್ತಿ. ಬೇಕಿದ್ದರೆ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಿ ನೋಡಲಿ ಎಂದು ಶ್ರೀಗಳು ಸವಾಲು ಹಾಕಿದರು. ಕೇರಳ ಸರಕಾರ ಧಾರ್ಮಿಕ ವಿಚಾರಗಳನ್ನು ಇಟ್ಟುಕೊಂಡು ಹಿಂದೂ ಧರ್ಮದ ಮೇಲೆ ಪ್ರಹಾರ ಮಾಡುವ ಕೆಲಸ ಮಾಡಬಾರದು. ಇದು ಜನಾಕ್ರೋಶಕ್ಕೆ ಕಾರಣವಾಗುತ್ತದೆ. ಹಾಗಾಗಿ ಜನಾಭಿಪ್ರಾಯದಂತೆ ನಡೆದುಕೊಳ್ಳುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.
ಶಾಸ್ತ್ರದಲ್ಲಿ ವಿರೋಧ ಇಲ್ಲ: ಪೇಜಾವರ ಶ್ರೀ
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ನಾನು ದ್ವಂದ್ವದಲ್ಲಿದ್ದೆ. ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸಾಂಪ್ರದಾಯದಲ್ಲಿ ವಿರೋಧವಿದೆ. ಆದರೆ ಶಾಸ್ತ್ರದಲ್ಲಿ ಮಹಿಳೆಯರ ಪ್ರವೇಶಕ್ಕೆ ವಿರೋಧವಿಲ್ಲ. ಹಾಗಾಗಿ ಈ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಅದನ್ನು ನ್ಯಾಯಾಲಯ ಅಥವಾ ಸರಕಾರದ ಮೂಲಕ ಬಗೆಹರಿಸಲು ಆಗಲ್ಲ. ಅದನ್ನು ಜನಾಭಿಪ್ರಾಯಕ್ಕೆ ಬಿಡಬೇಕು ಎಂದರು.
ಜನ ಬೆಂಬಲವಿಲ್ಲದ ಮಡೆಸ್ನಾನ ಮೊದಲಾದ ಸಂಪ್ರದಾಯಗಳನ್ನು ನಾನು ವಿರೋಧಿಸಿದ್ದು, ಪರಿವರ್ತನೆಯನ್ನು ಮಾಡಿದ್ದೇನೆ. ಅಲ್ಲದೆ, ಅಸ್ಪೃಶ್ಯತೆಯ ನಿವಾರಣೆಗಾಗಿ ನಾನು ದಲಿತ ಕೇರಿಗಳಿಗೆ ಹೋಗಿದ್ದೇನೆ. ಹಿಂದು ಧರ್ಮದಲ್ಲಿ ಅಸ್ಪೃಶ್ಯತೆಯ ಇದ್ದ ಹಾಗೇ ಮುಸ್ಲಿಂ ಧರ್ಮದಲ್ಲಿ ತಲಾಖ್ ಎಂಬುದು ಅಸ್ಪೃಶ್ಯತೆಯಾಗಿದೆ. ಜನಹಿತಕೋಸ್ಕರ ಸರ್ಕಾರ ತಲಾಖ್ ಪದ್ಧತಿಯನ್ನು ಬದಲಾಯಿಸಿದ್ದು, ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದರು.