ನಾಗಸಾಧುಗಳಿಗೆ ಅವಮಾನ ಉಡುಪಿಯಲ್ಲಿ ‘ಲಾಲ್ ಕಪ್ತಾನ್’ ಸಿನಿಮಾ ನಿಷೇಧಕ್ಕೆ ಆಗ್ರಹ

ಉಡುಪಿ: ಹಿಂದಿ ಭಾಷೆಯ ‘ಲಾಲ್ ಕಪ್ತಾನ್’ ಸಿನಿಮಾದಲ್ಲಿ ನಾಗ ಸಾಧುಗಳನ್ನು ಅವಮಾನ ಮಾಡಲಾಗಿದ್ದು, ಇದರಿಂದ ಹಿಂದು ಧಾರ್ಮಿಕ ಭಾವನೆಗೆ ದಕ್ಕೆಯಾಗುತ್ತದೆ. ಚಲನಚಿತ್ರವನ್ನು ನಿಷೇಧಿಸಬೇಕು ಎಂದು ಪೆಲತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಮೊಕ್ತೇಸರ ರಮೇಶ ಪೆಲತ್ತೂರು ಆಗ್ರಹಿಸಿದರು. ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಭಾನುವಾರ ಹಿಂದು ಜನಜಾಗೃತಿ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಚಲನಚಿತ್ರದಲ್ಲಿ ನಾಗಾ ಸಾಧುಗಳಿಗೆ ಸಂಬಂಧಪಟ್ಟ ಕೆಲವು ವಿಕೃತ ದೃಶ್ಯಗಳಿವೆ. ಆದಿ ಶಂಕರಾಚಾರ್ಯರು ಹಿಂದೂ ಧರ್ಮದ ರಕ್ಷಣೆಗಾಗಿ ನಾಗಾಸಾಧುಗಳ ಸೇನೆ ನಿರ್ಮಿಸಿದ್ದರು. ಹಿಂದೂ ಸಂಸ್ಕೃತಿಯಲ್ಲಿ ನಾಗಾಸಾಧುಗಳ ಸ್ಥಾನ ವಿಶೇಷ ಮಹತ್ವ ಪಡೆದಿದೆ. ನಾಗಾಸಾಧುಗಳನ್ನು ಚಲನಚಿತ್ರಗಳ ಮೂಲಕ ಅವಮಾನಿಸುವ ಪ್ರಯತ್ನ ಖಂಡನೀಯ. ಈ ಹಿನ್ನೆಲೆಯಲ್ಲಿ ಲಾಲ್ ಕಪ್ತಾನ್ ಚಿತ್ರ ಬಿಡುಗಡೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನ್ಯಾಯವಾದಿ ಸಂಜೀವ ಪುನಾಳೆಕರ ಅವರನ್ನು ಉದ್ದೇಶಪೂರ್ವಕವಾಗಿ ದಾಭೋಲ್ಕರ್ ಹತ್ಯೆಯಲ್ಲಿ ಸಿಲುಕಿಸುತ್ತಿರುವುದು ಸಂದೇಹಾಸ್ಪದವಾಗಿದೆ ಎಂದು ಸಮಿತಿ ಸಮನ್ವಯಕಾರ ವಿಜಯ ಕುಮಾರ್ ಹೇಳಿದರು.
ಸಿಬಿಐನ ಈ ನಡೆ ಸಂವಿಧಾನ‌ ವಿರೋಧಿ, ನ್ಯಾಯವಾದಿ ವ್ಯವಸ್ಥೆ ಹಾಗೂ ಜನತೆಯ ನ್ಯಾಯಾಂಗದ ಹಕ್ಕಿನ ಕಗ್ಗೊಲೆಯಾಗಿದೆ. ಪುನಾಳೇಕರ್ ಅವರ ಮೇಲೆ ದಾಖಲಿಸಿದ ಆರೋಪವನ್ನು ಕೂಡಲೇ ತೆಗೆಯಬೇಕು ಎಂದು ಆಗ್ರಹಿಸಿದರು.
ಸಮಿತಿ ಪ್ರಮುಖರಾದ ರಮಾನಂದ ಚಾತ್ರ, ನವೀನ ಕುಮಾರ, ಸತೀಶ್ ಕಿಣಿ ಮೊದಲಾದವರು ಪ್ರತಿಭಟನೆಯಲ್ಲಿದ್ದರು.