ಹಿಮಾಚಲ ಪ್ರದೇಶ ಮತ್ತು ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ: ರಮೇಶ್ ಕಾಂಚನ್

ಉಡುಪಿ: ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರವನ್ನು ಉಳಿಸಿಕೊಂಡಿರುವುದನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ. ಇದೇ ಹೊತ್ತಿನಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬಂದಿದೆ. ದೇಶದ ರಾಜಧಾನಿಯಾಗಿರುವ ದೆಹಲಿಯ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಒಂದು ರಾಜ್ಯದಲ್ಲಿ ಗೆದ್ದಿರುವುದನ್ನೇ ಸಂಭ್ರಮಿಸಿ ಎರಡು ಕಡೆ ಸೋತಿರುವುದನ್ನು ಮರೆಮಾಚಲಾಗುತ್ತಿದೆ.

ಕಾಂಗ್ರೆಸ್‌ ಮುಕ್ತ ಭಾರತ ಎಂದು ಹೇಳುತ್ತಿದ್ದ ಬಿಜೆಪಿಗೆ ಇತ್ತೀಚೆಗೆ ನಡೆದ ಹಲವು ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲ್ಲುವ ಮೂಲಕ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಅಸಾಧ್ಯ ಎಂದು ಜನರು ಸ್ಪಷ್ಟ ಸಂದೇಶ ನೀಡಿದ್ದಾರೆ. ಇದೀಗ ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಹಿಡಿದಿರುವುದು ಕಾಂಗ್ರೆಸ್‌ ಇನ್ನೂ ಒಂದು ಹೆಜ್ಜೆ ಮುಂದೆ ಬಂದಂತಾಗಿದೆ. ಕಾಂಗ್ರೆಸ್‌ ಮುಂದೆ ಇನ್ನಷ್ಟು ಬಲಿಷ್ಠಗೊಳ್ಳಲಿದೆ.

ಇನ್ನು ಗುಜರಾತ್‌ ಫಲಿತಾಂಶವನ್ನು ಕರ್ನಾಟಕದ ಮುಂದಿನ ಚುನಾವಣೆಗೆ ದಿಕ್ಸೂಚಿ ಎನ್ನುವುದು ಸರಿಯಲ್ಲ. ಅದು ದಿಕ್ಸೂಚಿಯಾದರೆ ಹಿಮಾಚಲ ಪ್ರದೇಶ ಯಾಕೆ ದಿಕ್ಸೂಚಿಯಲ್ಲ? ಕರ್ನಾಟಕವು ಭೌಗೋಳಿಕವಾಗಿ ಭಿನ್ನವಾದುದು. ಇಲ್ಲಿನ ಜನಜೀವನ, ಚಿಂತನ ಕ್ರಮ ಎಲ್ಲವೂ ಭಿನ್ನವಾಗಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯಿಂದ ಮಾತ್ರವಲ್ಲ, ರಾಜ್ಯ ಸರ್ಕಾರದ ಜನವಿರೋಧಿ ನೀತಿಯಿಂದಲೂ ಜನರು ಬೇಸತ್ತಿದ್ದಾರೆ. ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಶತಸಿದ್ಧ. ಬೇರೆ ಯಾವುದೋ ರಾಜ್ಯದ ಚುನಾವಣೆ ಇಲ್ಲಿ ಪ್ರಭಾವ ಬೀರದು.

ಮಲ್ಲಿಕಾರ್ಜುನ್ ಖರ್ಗೆ ಅವರು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾದ ಮೇಲೆ ಹಾಗೂ ರಾಹುಲ್ ಗಾಂಧಿ ಮತ್ತು ಅನೇಕ ಹಿರಿಯ ಹಾಗೂ ಕಿರಿಯ ಮುಖಂಡರ ಸಾಮೂಹಿಕ ನಾಯಕತ್ವದಲ್ಲಿ ಬಿಜೆಪಿಯ ಪತನ ಆರಂಭಗೊಂಡಿದೆ. ಇದು ಇನ್ನೂ ಮುಂದುವರಿಯಲಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.