140 ವರ್ಷಗಳಲ್ಲಿಯೇ ಚೀನಾ ರಾಜಧಾನಿ ಬೀಜಿಂಗ್​ನಲ್ಲಿ ಅತ್ಯಧಿಕ ಮಳೆ; 20 ಸಾವು

ಬೆಂಗಳೂರು: ದಕ್ಷಿಣ ಚೀನಾದ ಪ್ರಾಂತ್ಯಗಳಲ್ಲಿ ಭಾರಿ ಅನಾಹುತಕ್ಕೆ ಕಾರಣವಾದ ಡೊಕ್ಸುರಿ ಚಂಡಮಾರುತ ನಂತರ ಉತ್ತರಕ್ಕೆ ಚಲಿಸಿದ್ದರಿಂದ ಸುರಿದ ಮಳೆಯಿಂದಾಗಿ ಉತ್ತರ ಚೀನಾ ಪ್ರವಾಹದಲ್ಲಿ ಮುಳುಗಿದೆ. ಬೀಜಿಂಗ್ ಮತ್ತು ಹೆಬೈ ಪ್ರಾಂತ್ಯದ ಸುತ್ತಮುತ್ತಲಿನ ಪ್ರದೇಶಗಳು ತೀವ್ರ ಪ್ರವಾಹಕ್ಕೆ ತುತ್ತಾಗಿದ್ದು, ನೀರು ಅಪಾಯಕಾರಿ ಮಟ್ಟಕ್ಕೆ ಏರಿದೆ. ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕುಡಿಯುವ ನೀರು ಪೂರೈಸುವ ಪೈಪ್‌ಗಳು ಸಹ ಹಾಳಾಗಿವೆ.ಚೀನಾದ ರಾಜಧಾನಿ ಬೀಜಿಂಗ್​ನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕಳೆದ 140 ವರ್ಷಗಳಲ್ಲಿ ದಾಖಲಾದ ಅತಿಹೆಚ್ಚು ಮಳೆ ಇದು ಎಂದು ವರದಿಗಳು ತಿಳಿಸಿವೆ. ಶನಿವಾರ (ಜುಲೈ 29) ಮತ್ತು ಬುಧವಾರ ಬೆಳಗಿನ (ಆಗಸ್ಟ್ 2) ನಡುವೆ ನಗರದಲ್ಲಿ 744.8 ಮಿಲಿಮೀಟರ್ (29.3 ಇಂಚು) ಮಳೆ ದಾಖಲಾಗಿದೆ ಎಂದು ಬೀಜಿಂಗ್ ಹವಾಮಾನ ಬ್ಯೂರೋ ಆಗಸ್ಟ್ 2 ರಂದು ತಿಳಿಸಿದೆ.ಚೀನಾ ರಾಜಧಾನಿ ಬೀಜಿಂಗ್​​ನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ 20 ಜನ ಸಾವಿಗೀಡಾಗಿದ್ದಾರೆ.

ಬೀಜಿಂಗ್ ಸುತ್ತಮುತ್ತಲು ಸುರಿದ ಧಾರಾಕಾರ ಮಳೆಯಿಂದ ಕನಿಷ್ಠ 20 ಜನ ಸಾವಿಗೀಡಾಗಿದ್ದಾರೆ ಮತ್ತು 27 ಜನ ಕಾಣೆಯಾಗಿದ್ದಾರೆ ಎಂದು ಚೀನಾದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಚೀನಾದಲ್ಲಿ 1883 ರಿಂದ ಮಳೆಮಾಪನ ಯಂತ್ರಗಳನ್ನು ಬಳಸಿ ನಿಖರವಾಗಿ ಮಳೆ ಪ್ರಮಾಣವನ್ನು ಅಳೆಯಲಾಗುತ್ತಿದೆ. 1891ರಲ್ಲಿ ಬೀಜಿಂಗ್​​ ಪ್ರದೇಶದಲ್ಲಿ 609 ಮಿಲಿಮೀಟರ್ (24 ಇಂಚು) ಮಳೆ ಸುರಿದಿತ್ತು. ಅದರ ನಂತರ ಈ ಬಾರಿ ಸುರಿದ ಮಳೆ ಅತ್ಯಧಿಕವಾಗಿದೆ ಎಂದು ಮೂಲಗಳು ತಿಳಿಸಿವೆ.ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಷ್ಟು ಮಂದಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ ಎಂಬುದು ತಿಳಿದಿಲ್ಲ. ಬುಧವಾರ ಝೌಝೌ ಗಡಿಯಲ್ಲಿರುವ ಹೆಬೈನಲ್ಲಿರುವ ಗುವಾನ್ ಕೌಂಟಿಯಲ್ಲಿನ ನೀರು, ಕಣ್ಗಾವಲು ಕ್ಯಾಮೆರಾ ಸ್ಥಾಪಿಸಿದ ಕಂಬದ ಅರ್ಧದಷ್ಟು ಎತ್ತರಕ್ಕೆ ತಲುಪಿತ್ತು.

ಡೋಕ್ಸುರಿ ಚಂಡಮಾರುತದಿಂದ ಸುರಿದ ದಾಖಲೆಯ ಮಳೆಯ ನಂತರ ಮತ್ತೊಂದು ಜಲಾಘಾತ ಎದುರಾಗಬಹುದು. ಬುಧವಾರ ಜಪಾನ್‌ಗೆ ಅಪ್ಪಳಿಸಿರುವ ಚಂಡಮಾರುತ ಖಾನುನ್, ಈ ವಾರದ ಕೊನೆಯಲ್ಲಿ ಚೀನಾದತ್ತ ಸಾಗುವ ನಿರೀಕ್ಷೆಯಿದೆ. ಈ ಪ್ರಬಲ ಚಂಡಮಾರುತವು ಗಂಟೆಗೆ 180 ಕಿಮೀ ವೇಗದಲ್ಲಿ ಬೀಸುತ್ತಿದ್ದು, ತೈವಾನ್‌ಗೆ ಅಪ್ಪಳಿಸಬಹುದು. ಈ ಚಂಡಮಾರುತವು ಚೀನಾ ಮತ್ತು ತೈವಾನ್‌ನಲ್ಲಿ ಭಾರಿ ಮಳೆ ಸುರಿಸುವ ಸಾಧ್ಯತೆಗಳಿವೆ.ಬೀಜಿಂಗ್ ಉಪನಗರ ಮತ್ತು ಹತ್ತಿರದ ನಗರಗಳಲ್ಲಿನ ಸಾವಿರಾರು ಜನರನ್ನು ಸ್ಥಳಾಂತರಿಸಿ ಶಾಲೆಗಳು ಮತ್ತು ಇತರ ಸಾರ್ವಜನಿಕ ಕಟ್ಟಡಗಳಲ್ಲಿ ಆಶ್ರಯ ನೀಡಲಾಗಿದೆ. 8,50,000 ಕ್ಕೂ ಹೆಚ್ಚು ಜನರನ್ನು ಪರಿಹಾರ ಮತ್ತು ರಕ್ಷಣಾ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೆಬೈ ಪ್ರಾಂತ್ಯದ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದ ತೀವ್ರತೆಯಿಂದ ರಾಜಧಾನಿಯ ನಿವಾಸಿಗಳು ತಲ್ಲಣಗೊಂಡಿದ್ದಾರೆ. ಬೀಜಿಂಗ್​ನಲ್ಲಿ ಬೇಸಿಗೆ ಸಾಮಾನ್ಯವಾಗಿ ಶುಷ್ಕವಾಗಿರುತ್ತದೆ. ಆದರೆ ಈ ವರ್ಷ ಮಳೆಯಂತೆ ತಾಪಮಾನವೂ ವಿಪರೀತ ಹೆಚ್ಚಾಗಬಹುದು ಎಂದು ಮುನ್ಸೂಚನೆಗಳು ಹೇಳಿವೆ.