ಬೆಂಗಳೂರು: ಈ ರೀತಿಯ ಸೌಲಭ್ಯಗಳ ಕೊರತೆ ಇರುವ ಶಾಲೆಗಳಿಗೆ ಯಾವ ಪೋಷಕರು ತಾನೇ ಮಕ್ಕಳನ್ನು ಕಳುಹಿಸಲು ಮುಂದಾಗುತ್ತಾರೆ ಎಂದು ರಾಜ್ಯ ಹೈಕೋರ್ಟ್ ಅಸಮಾಧಾನ ಹೊರಹಾಕಿದೆ.
ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಐ) ಮಾನದಂಡಗಳಿಗೆ ಅನುಗುಣವಾಗಿ ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆ ವಿಷಯವಾಗಿ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
‘ಶಾಲೆಯಿಂದ ಹೊರಗುಳಿದ ಮಕ್ಕಳು’ – ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿಯನ್ನು ಆಧರಿಸಿ ಸ್ವಯಂ ಪ್ರೇರಿತವಾಗಿ ದಾಖಿಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ. ಜೆ. ಎಸ್. ಕಮಲ್ ಅವರಿದ್ದ ನ್ಯಾಯಪೀಠ, ಶಾಲೆಗಳಲ್ಲಿ ಶೌಚಾಲಯಗಳ ಸ್ಥಿತಿ ಅತ್ಯಂತ ಕರುಣಾಜನಕವಾಗಿದೆ. ಈ ರೀತಿಯ ವರದಿ ಸಲ್ಲಿಸಿರುವ ಅಧಿಕಾರಿಯ ಮನೆಯಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದೆಯಾ ಎಂದು ನ್ಯಾಯಪೀಠ ಪ್ರಶ್ನೆ ಮಾಡಿದೆ.
ಅಲ್ಲದೇ, ಅನುದಾನದ ಲಭ್ಯತೆಯ ಮೇರೆಗೆ ಮೂಲಸೌಲಭ್ಯಗಳನ್ನು ಕಲ್ಪಿಸುವುದಾಗಿ ತಿಳಿಸಿದ ಸರ್ಕಾರದ ಪರ ವಕೀಲರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಅನುದಾನ ಲಭ್ಯತೆ ಆಧಾರದಲ್ಲಿ ಎಂದು ಹೇಳುವಂತಿಲ್ಲ. ಮಕ್ಕಳ ಶಿಕ್ಷಣಕ್ಕಾಗಿ ಬಜೆಟ್‌ನಲ್ಲಿ ಪ್ರತೇಕ ಅನುದಾನವನ್ನು ಮೀಸಲಿಡಬೇಕು. ಆ ಮೊತ್ತವನ್ನು ನಿರ್ದಿಷ್ಟ ಕಾಲ ಮಿತಿಯಲ್ಲಿ ವಿನಿಯೋಗಿಸಬೇಕು ಎಂದು ಕರ್ನಾಟಕದ ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿಗಳು ನಿರ್ದೇಶನ ನೀಡಿದರು.
ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ: ಶೌಚಾಲಯ ನಿರ್ಮಾಣ ವಿಚಾರ ಸಂಬಂಧ ಸರ್ಕಾರ ಕಣ್ಣೊರೆಸುವ ತಂತ್ರ ನಡೆಸತ್ತಿದೆ. ಕೆಲ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಗಳಿಗೆ ನೀರಿನ ಸೌಲಭ್ಯ ಇಲ್ಲ. ನೀರನ್ನು ಹೊತ್ತು ತರುವ ಪರಿಸ್ಥಿ ಇದೆ. ಹೀಗಾಗಿ ಮೊದಲು ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯದ ಹೈಕೋರ್ಟ್ ಪೀಠ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಪ್ರತಿಭಾವಂತರಿಗೆ ಶಿಕ್ಷಣ ದೊರೆಯದಿದ್ದರೆ ಅದು ರಾಷ್ಟ್ರೀಯ ನಷ್ಟ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಲಭ್ಯವಾಗದಿದ್ದಲ್ಲಿ ಅದು ರಾಷ್ಟ್ರೀಯ ನಷ್ಟಕ್ಕೆ ಕಾರಣವಾಗಲಿದೆ ಎಂದು ಪೀಠ ಅಭಿಪ್ರಾಯಪಟ್ಟಿತು. ಅಲ್ಲದೇ, ನಾಡಿನ ಭವಿಷ್ಯ ಇರುವುದೇ ಶಾಲೆಗಳಲ್ಲಿ. ಶಾಲೆಗಳ ಸ್ಥಿತಿ ಈ ರೀತಿ ಇದ್ದರೆ, ಹೇಗೆ ಅಭಿವೃದ್ಧಿ ಆಗಲು ಸಾಧ್ಯ ಎಂದು ಪ್ರಶ್ನೆ ಮಾಡಿತು.