ಹೈಕೋರ್ಟ್ ನ್ಯಾಯಾಧೀಶ ನ್ಯಾ.ವೀರಪ್ಪರವರಿಂದ ಜಿಲ್ಲಾಸ್ಪತ್ರೆಗೆ ಅನಿರೀಕ್ಷಿತ ಭೇಟಿ: ಆಸ್ಪತ್ರೆಯ ಮೂಲ ಸೌಕರ್ಯಗಳ ಪರಿಶೀಲನೆ

ಉಡುಪಿ: ಶನಿವಾರದಂದು ಕರ್ನಾಟಕ ಹೈಕೋರ್ಟ್‍ನ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ.ವೀರಪ್ಪರವರು ಉಡುಪಿ ಜಿಲ್ಲಾಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ, ಆಸ್ಪತ್ರೆಯಲ್ಲಿ ರೋಗಿಗಳನ್ನು ವಿಚಾರಿಸಿ, ಆಸ್ಪತ್ರೆಯ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೈದ್ಯರು ಮತ್ತು ಶುಶ್ರೂಷಕ ಸಿಬ್ಬಂದಿಗಳು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದವರಿಗೆ ಆತ್ಮವಿಶ್ವಾಸ ಮೂಡಿಸುವುದರ ಮೂಲಕ ಅವರು ಶೀಘ್ರದಲ್ಲಿ ಚೇತರಿಸಿಕೊಳ್ಳುವಂತೆ ಪ್ರೇರೆಪಿಸಬೇಕು. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದವರಿಗೆ ಉತ್ತಮ ಚಿಕಿತ್ಸೆ ನೀಡುವುದು ಮಾತ್ರವಲ್ಲದೇ, ವಾರದಲ್ಲಿ ಒಂದು ದಿನ ಆಸ್ಪತ್ರೆಯ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳು ಅವರಿಗೆ ಆತ್ಮವಿಶ್ವಾಸ ಮೂಡಿಸುವುದರ ಮೂಲಕ ಅವರು ಶೀಘ್ರದಲ್ಲಿ ಗುಣಮುಖರಾಗಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ಸಾಹದಿಂದ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದರು.

ಪುರುಷರ ವಾರ್ಡ್‍ನಲ್ಲಿ ಅಪಘಾತದಿಂದ ಶಸ್ತ್ರಚಿಕಿತ್ಸೆಗೆ ಒಳಗಾದವರನ್ನು ವಿಚಾರಿಸಿದ ಅವರು, ವಾಹನ ಚಾಲನೆ ಸಂದರ್ಭದಲ್ಲಿ ಮದ್ಯಪಾನ ಮಾಡುವುದು, ಅತಿವೇಗದಿಂದ ವಾಹನ ಚಲಾವಣೆ ಮತ್ತು ಹೆಲ್ಮೆಟ್ ಧರಿಸದೆ ಅಪಘಾತಗಳಿಗೆ ಒಳಗಾಗಿ ದಾಖಲಾಗುತ್ತಿರುವುದನ್ನು ತಿಳಿದು, ಜಿಲ್ಲಾ ಪೊಲೀಸ್ ಇಲಾಖೆಯು ಸಂಚಾರ ನಿಯಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು.

ಉಡುಪಿ ಜಿಲ್ಲಾಸ್ಪತ್ರೆಯ ನಿರ್ವಹಣೆ ಉತ್ತಮವಾಗಿದೆ, ಸಾರ್ವಜನಿಕರು ಇಲ್ಲಿನ ಸೌಲಭ್ಯಗಳ ಪ್ರಯೋಜನ ಪಡೆಯಬೇಕು. ಜಿಲ್ಲೆಯಲ್ಲಿ ನಿರಾಶ್ರಿತರಿಗೆ ಉತ್ತಮ ಕೇಂದ್ರ ಸ್ಥಾಪನೆಯ ಅಗತ್ಯವಿದ್ದು ಈ ಬಗ್ಗೆ ಸರಕಾರಕ್ಕೆ ವರದಿ ನೀಡುತ್ತೇವೆ ಎಂದರು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ, ಜಿಲ್ಲಾ ಸರ್ಜನ್ ಡಾ.ಮುಧುಸೂದನ್ ನಾಯಕ್ ಮತ್ತು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದರು.