ಉಡುಪಿ: ಹಿಜಾಬ್ ವಿಚಾರದಲ್ಲಿ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಇದು ರಾಜ್ಯದ ವಿದ್ಯಾರ್ಥಿಗಳ ಸುವ್ಯವಸ್ಥಿತ ಶಿಕ್ಷಣಕ್ಕಾಗಿ ನಡೆಸಿದ ಕಾನೂನು ಬದ್ಧ ಹೋರಾಟಕ್ಕೆ ಸಂದ ಜಯವಾಗಿದ್ದು, ಹಿಜಾಬ್ ವಿವಾದದ ಮೂಲಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದ ಮತಾಂಧ ಶಕ್ತಿಗಳ ವಿರುದ್ಧ ಹೋರಾಟ ನಿರಂತರವಾಗಿರಲಿದೆ ಎಂದು ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ಮಂದಿ ವಿದ್ಯಾರ್ಥಿನಿಯರು ಮತಾಂಧ ದೇಶದ್ರೋಹಿ ಸಂಘಟನೆಗಳ ಕುಮ್ಮಕ್ಕಿನಿಂದ ಉಡುಪಿಯಲ್ಲಿ ಆರಂಭಗೊಂಡ ಹಿಜಾಬ್ ವಿವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಗಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸಲು ಹೊರಟವರಿಗೆ ಹೈಕೋರ್ಟ್ ಆದೇಶ ತಕ್ಕ ಉತ್ತರ ನೀಡಿದೆ ಎಂದಿದ್ದಾರೆ.
ಶಿಕ್ಷಣ ವ್ಯವಸ್ಥೆಯೊಂದಿಗೆ ಚೆಲ್ಲಾಟವಾಡಿ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರಾಗಿಸುವ ಹುನ್ನಾರ ನಡೆಸಿದ್ದ ಎಸ್ ಡಿ ಪಿ ಐ, ಸಿ ಎಫ್ ಐ ಸಂಘಟನೆಗಳ ವಿರುದ್ಧ ಸಂಘಟಿತ ಕಾನೂನು ಹೋರಾಟದ ಮೂಲಕ ಮೊದಲ ಜಯವನ್ನು ಸಾಧಿಸಿದ್ದು, ರಾಷ್ಟ್ರ ವಿರೋಧಿ ಸಂಘಟನೆಗಳ ವಿರುದ್ಧ ಮುಂದಿನ ದಿನಗಳಲ್ಲಿಯೂ ಹೋರಾಟ ನಿರಂತರವಾಗಿ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.