ಸಾರಿಗೆ ನೌಕರರ ಮುಷ್ಕರಕ್ಕೆ ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್!

ಬೆಂಗಳೂರು: ರಾಜ್ಯ ಹೈಕೋರ್ಟ್, ರಾಜ್ಯದ ಸಾರಿಗೆ ನೌಕರರ ಸಂಘಟನೆಗಳು ಘೋಷಿಸಿದ್ದ ಮುಷ್ಕರಕ್ಕೆ ತಾತ್ಕಾಲಿಕ ತಡೆ ನೀಡಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರ ಸಂಘಟನೆಗಳು ಕರೆ ನೀಡಿದ್ದ ಮುಷ್ಕರವನ್ನು ನಡೆಸದಂತೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.

ನ್ಯಾ. ಸುರಜ್ ಗೋವಿಂದರಾಜ್ ಮತ್ತು ನ್ಯಾ. ಕೆ. ಮನ್ಮಥ ರಾವ್ K. ಅವರಿದ್ದ ಪೀಠ, ಸಾರ್ವಜನಿಕರ ಹಿತದೃಷ್ಟಿಯಿಂದ ಯಾವುದೇ ಪ್ರತಿಭಟನೆ ನಡೆಸಬಾರದು ಎಂದು ಸೂಚಿಸಿದೆ. ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಾರಿಗೆ ಸಂಘಟನೆಗಳಿಗೆ ಕೋರ್ಟ್ ಸಲಹೆ ನೀಡಿದೆ.

ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಕೆಲಸದ ಮಹಿಳೆ ಹಾಗೂ ಕಟ್ಟಡ ಕಾರ್ಮಿಕರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೊಳ್ ವಾದ ಮಂಡಿಸಿದರು.

ವಿಚಾರಣೆ ವೇಳೆ “ಈಗಾಗಲೇ ಶೇ.12.5ರಷ್ಟು ವೇತನ ಹೆಚ್ಚಳ ನೀಡಲಾಗಿದೆ. ಇನ್ನೂ ಮುಷ್ಕರ ಯಾಕೆ?” ಎಂದು ಹೈಕೋರ್ಟ್ ಪ್ರಶ್ನಿಸಿತು. ಇದಕ್ಕೆ ಪ್ರತಿಯಾಗಿ ಸಾರಿಗೆ ನೌಕರರ ಪರ ವಕೀಲರು “ನಮ್ಮ ಬೇಡಿಕೆಗಳನ್ನು ಸಮರ್ಪಕವಾಗಿ ಪರಿಗಣಿಸುತ್ತಿಲ್ಲ” ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಇಂದು ಮುಷ್ಕರ ನಡೆಸದಂತೆ ತಡೆಹಿಡಿಯುತ್ತೇವೆ. ಸರ್ಕಾರದೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಷ್ಕರಿಸಲು ಪ್ರಯತ್ನಿಸಿ” ಎಂದು ಸೂಚಿಸಿದೆ. ಜೊತೆಗೆ ಸರ್ಕಾರ ಹಾಗೂ ಸಾರಿಗೆ ಸಂಘಟನೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸಾರಿಗೆ ಸಚಿವರು, ಸಂಬಂಧಿತ ಕಾರ್ಯದರ್ಶಿಗಳು ಮತ್ತು ಜಂಟಿ ಕ್ರಿಯಾ ಸಮಿತಿಯೊಂದಿಗೆ ಸಭೆ ನಡೆಸುವಂತೆ ನ್ಯಾಯಾಲಯ ಸೂಚನೆ ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ.