ಬೆಂಗಳೂರು: ಹೈ ಕಮಾಂಡ್ ನಾಯಕರು ಹೇಳುವ ಮಾತೇ ಅಂತಿಮವಾಗಿದ್ದು, ನಾನಾಗಲಿ, ಡಿಸಿಎಂ ಡಿಕೆ ಶಿವಕುಮಾರ ಆಗಲಿ ವರಿಷ್ಠರು ಹೇಳಿದ್ದನ್ನು ಪಾಲಿಸುತ್ತೇವೆ, ಅಲ್ಲಿಯವರೆಗೆ ನಾನೇ ಮುಂದುವರೆಯುತ್ತೇನೆ, ಬಜೆಟ್ ಕೂಡ ನಾನೇ ಮಂಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ನಾಯಕತ್ವದ ಬದಲಾವಣೆಯ ಬಗ್ಗೆ ಹೈ ಕಮಾಂಡ್ ನಾಯಕರು ಮಾತನಾಡಿದ್ದಾರಾ..? ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ್ದು, ಅವರೇ ಹೇಳದಿದ್ದ ಮೇಲೆ ಈ ಚರ್ಚೆ ಅನಾವಶ್ಯಕ, ದೆಹಲಿಗೆ ಹೋಗುವವರು ಹೋಗಲಿ ಎಂದು ಹೇಳಿದ್ದಾರೆ. ನಿನ್ನೆ ಕಾಂಗ್ರೆಸ್ನ ಕೆಲ ಶಾಸಕರು ದೆಹಲಿ ಯಾತ್ರೆ ಕೈಗೊಂಡಿದ್ದು, ಇವರೆಲ್ಲಾ ಡಿಸಿಎಂ ಡಿಕೆಶಿ ಆಪ್ತರು ಎನ್ನಲಾಗಿದೆ, ತಮ್ಮ ನಾಯಕರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ಮಾಜಿ ಸಂಸದ ಡಿಕೆ ಸುರೇಶ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಹೌದು ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುವವನು, ಆದ್ದರಿಂದಲೇ ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇನೆ ಎಂದರು.
ಕೃಷಿ ಸಚಿವ ಚೆಲುವರಾಯಸ್ವಾಮಿ ದೆಹಲಿ ಭೇಟಿಯ ಕುರಿತು ಮಾತನಾಡಿದ ಸಿಎಂ, ಈಗಾಗಲೇ ನಾನು ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ್ದೇನೆ, ಕೇಂದ್ರ ಸಚಿವರನ್ನು ಭೇಟಿಯಾಗಲು ಬಂದಿದ್ದಾಗಿ ಹೇಳಿದ್ದಾರೆ, ಈ ವಿಷಯವಾಗಿ ಹೆಚ್ಚಿಗೆ ವಿವರಣೆ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.


















